ಕೇಸ್ ದಾಖಲಿಸಲು ದಂಪತಿ ಹಾಜರಿ ಬೇಡ! ಕೌಟುಂಬಿಕ ಪ್ರಕರಣಗಳಿಗೆ ಅನ್ವಯ ಹೈಕೋರ್ಟ್ ನಿರ್ದೇಶನ

front page 2
Published on

ಬೆಂಗಳೂರು: ಕೌಟುಂಬಿಕ ಪ್ರಕರಣಗಳಲ್ಲಿ ಅರ್ಜಿ ದಾಖಲಿಸುವ ವೇಳೆ ಕೌಟುಂಬಿಕ ನ್ಯಾಯಾಲಯಗಳು ಅರ್ಜಿದಾರರ ಖುದ್ದು ಹಾಜರಾತಿಗೆ ಸೂಚಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

ಕರೊನಾ ಹಿನ್ನೆಲೆಯಲ್ಲಿ ಎಸ್​ಒಪಿ ಅನುಸಾರ ಜೂ.1ರಿಂದ ರಾಜ್ಯದ ಜಿಲ್ಲಾ ಹಾಗೂ ವಿಚಾರಣಾ ಕೋರ್ಟ್​ಗಳ ನಿಯಮಿತ ಕಲಾಪ ಆರಂಭಗೊಂಡಿದೆ. ಕೌಟುಂಬಿಕ ಪ್ರಕರಣಗಳು, ಕ್ರಿಮಿನಲ್ ಪ್ರಕರಣಗಳ ದೂರು ದಾಖಲಿಸುವ, ಆರೋಪಿಗಳ ಹೇಳಿಕೆ ದಾಖಲಿಸುವ, ದೋಷಾರೋಪ ನಿಗದಿಪಡಿಸುವ, ರಿಮ್ಯಾಂಡ್ ಪ್ರಕ್ರಿಯೆ ಸೇರಿ ಕಕ್ಷಿದಾರರ ಖುದ್ದು ಹಾಜರಿ ಅಗತ್ಯವಿರುವ ಪ್ರಕರಣಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸುವಾಗ ಎದುರಾಗುವ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಡಕುಗಳಿಗೆ ಪರಿಹಾರ ಹುಡುಕಲು ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಕೌಟುಂಬಿಕ ಪ್ರಕರಣಗಳಲ್ಲಿ ಅರ್ಜಿ ದಾಖಲಿಸುವ ವೇಳೆ ಅರ್ಜಿದಾರರ ಖುದ್ದು ಹಾಜರಾತಿಗೆ ಸೂಚಿಸುವ ಸಂಬಂಧ ಕೌಟುಂಬಿಕ ನ್ಯಾಯಾಲಯಗಳು ರೂಢಿಸಿಕೊಂಡಿರುವ ಕ್ರಮಕ್ಕೆ ಯಾವುದೇ ಕಾನೂನಿನ ಆಧಾರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಉಭಯ ಕಕ್ಷಿದಾರರ ವಕೀಲರು ಹಾಜರಿದ್ದಲ್ಲಿ, ಅರ್ಜಿ ದಾರರು ಅಥವಾ ಪ್ರತಿವಾದಿಗಳನ್ನು ಖುದ್ದು ಕೋರ್ಟ್​ಗೆ ಹಾಜರಾಗಲು ಸೂಚಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಇದೇ ವೇಳೆ, ಪರಸ್ಪರ ಸಮ್ಮತಿ ಮೇರೆಗೆ ದಂಪತಿ ವಿಚ್ಛೇದನ ಅರ್ಜಿ ಸಲ್ಲಿಸುವ ಸಂದರ್ಭದಲ್ಲೂ ಅವರ ಖುದ್ದು ಹಾಜರಿಗೆ ಒತ್ತಾಯಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ನ್ಯಾಯಾಲಯ ಹೇಳಿದ್ದು: ಸಿಆರ್​ಪಿಸಿ ಸೆಕ್ಷನ್ 190(1)(ಎ) ಅಡಿ ಲಿಖಿತ ದೂರು ದಾಖಲಿಸುವ ಸಂದರ್ಭದಲ್ಲಿ ದೂರುದಾರರನ್ನು ಅವರ ವಕೀಲರು ಪ್ರತಿನಿಧಿಸುತ್ತಿದ್ದರೆ ಅಂಥ ಸಂದರ್ಭದಲ್ಲಿ ದೂರುದಾರರಿಗೆ ಖುದ್ದು ಹಾಜರಾಗುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಸೂಚಿಸಬಾರದು ಎಂದೂ ನ್ಯಾಯಾಲಯ ಆದೇಶಿಸಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳನ್ನು ಮೊದಲ ಬಾರಿ ಮ್ಯಾಜಿಸ್ಟ್ರೇಟ್ ಮುಂದೆ ಕಡ್ಡಾಯವಾಗಿ ಹಾಜರುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಸರಿಸುವ ಕಾರ್ಯವಿಧಾನಗಳ ಕುರಿತು ಸರ್ಕಾರ ಹಾಗೂ ಪೊಲಿಸ್ ಇಲಾಖೆಯಿಂದ ಮಾಹಿತಿ ಪಡೆದು ತಿಳಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್​ಗೆ ಸೂಚಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net