ರಾಖಿ ಕಟ್ಟಲು ಸಹೋದರ ಬೇಕೆಂದು ಹಠ ಹಿಡಿದ ಮಗಳು; ನವಜಾತ ಶಿಶುವನ್ನೇ ಅಪಹರಿಸಿದ ದಂಪತಿ

Rakhi Kidnap
Published on

ನವದೆಹಲಿ: ರಕ್ಷಾ ಬಂಧನ ಒಂದು ಪ್ರಾಚೀನ ಹಬ್ಬವಾಗಿದ್ದು, ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ. ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಸಂಕಲ್ಪ ಹೊಂದಿರುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆ ದಿನದಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ದೇಶಾದ್ಯಂತ ಆಗಸ್ಟ್​ 30ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ರಕ್ಷಾ ಬಂಧನದ ದಿನ ತನಗೆ ರಾಖಿ ಕಟ್ಟಲು ಸಹೋದರ ಬೇಕು ಎಂದು ಮಗಳು ಹಠ ಮಾಡಿದಳೆಂಬ ಕಾರಣಕ್ಕೆ ದಂಪತಿಗಳಿಬ್ಬರು ನವಜಾತ ಗಂಡು ಶಿಶುವನ್ನು ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಸಂಜಯ್​ ಗುಪ್ತಾ(41) ಹಾಗೂ ಅನಿತಾ ಗುಪ್ತಾ(36) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಹಿನ್ನಲೆ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಉತ್ತರ ವಿಭಾಗದ ಡಿಸಿಪಿ ಸಾಗರ್​ ಸಿಂಗ್​ ಕಳ್ಸಿ ಸಂಜಯ್​ ಹಾಗೂ ಅನಿತಾ ದಂಪತಿಯ ಪುತ್ರ (17 ವರ್ಷ) ಕಳೆದ ವರ್ಷದ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ತಮ್ಮ ಪುತ್ರಿ ರಕ್ಷಾ ಬಂಧನದ ದಿನ ರಾಖಿ ಕಟ್ಟಲು ಸಹೋದರ ಬೇಕು ಎಂದು ಹಠ ಹಿಡಿದಿದ್ದರಿಂದ ಈ ರೀತಿ ಮಾಡಿದ್ದಾಗಿ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ.

Rakhi Kidnap
ಬಂಧಿತ ಆರೋಪಿಗಳು

ಗುರುವಾರ ಬೆಳಗಿನ ಜಾವ 4:43ರ ಸುಮಾರಿಗೆ ಛಟ್ಟಾ ರೈಲ್​ ಚೌಕನ್​ ಫುಟ್​ಪಾತ್​ನಲ್ಲಿ ಮಲಗಿದ್ದ ವಿಕಲಚೇತನರೊಬ್ಬರ ಮಗುವನ್ನು ಅಪಹರಿಸಲಾಗಿದೆ ಎಂದು ಪೊಲೀಸ್​ ಕಂಟ್ರೋಲ್​ ರೂಮಿಗೆ ಕರೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸುಮಾರು 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್​ನ ನಂಬರ್​ ಪತ್ತೆ ಹಚ್ಚಿದ್ದರು.

ಮಗಳು ಹಠ ಮಾಡಿದ್ದಕ್ಕೆ ಕೃತ್ಯ

ಬೈಕ್​ ಯಾರ ಹೆಸರಿನಲ್ಲಿದೆ ಎಂದು ಪರಿಶೀಲಿಸಿದಾಗ ಆರೋಪಿ ಸಂಜಯ್​ ಹೆಸರಿನಲ್ಲಿರುವುದು ಕಂಡು ಬಂದಿತ್ತು. ಆರೋಪಿ ಟ್ಯಾಗೋರ್​ ನಗರದ ರಘುಬೀರ್​ ಬ್ಲಾಕ್​ನಲ್ಲಿ ವಾಸವಿರುವುದು ಬೆಳಕಿಗೆ ಬಂತು. ಎಚ್ಚೆತ್ತ ಅಧಿಕಾರಿಗಳ ತಂಡ ಕೂಡಲೇ ಆರೋಪಿ ದಂಪತಿಗಳಿಬ್ಬರನ್ನು ವಶಕ್ಕೆ ಪಡೆಯಿತು ಮತ್ತು ಅಪಹರಣಕ್ಕೊಳಗಾಗಿದ್ದ ಮಗುವನ್ನು ರಕ್ಷಿಸಿ ಪಾಲಕರ ಮಡಿಲಿಗೆ ಒಪ್ಪಿಸಿದ್ದಾರೆ.

ಕಳೆದ ವರ್ಷ ತಮ್ಮ ಮಗ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ತಮ್ಮ ಮಗಳು ರಾಖಿ ಕಟ್ಟಲು ಸಹೋದರ ಬೇಕು ಎಂದು ಹಠ ಹಿಡಿದಿದ್ದರಿಂದ ಮಗುವನ್ನು ಅಪಹರಿಸಿದ್ದಾಗಿ ದಂಪತಿಗಳು ತಪ್ಪೊಪ್ಪಿಕೊಂಡಿದ್ದಾರೆ. ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್​ ಆಗಿರುವ ಸಂಜಯ್​ ವಿರುದ್ಧ ಮೂರು ಕ್ರಿಮಿನಲ್​ ಕೇಸ್​ಗಳ ವಿಚಾರಣೆ ನಡೆಯುತ್ತಿದೆ. ಅವರ ಪತ್ನಿ ಮೆಹಂದಿ ಆರ್ಟಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ದೆಹಲಿ ಉತ್ತರ ವಿಭಾಗದ ಡಿಸಿಪಿ ಸಾಗರ್​ ಸಿಂಗ್​ ಕಳ್ಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net