

ಬಾಳೆಹೊನ್ನೂರು: ಶೃಂಗೇರಿಯಿಂದ ಹಾಸನಕ್ಕೆ ಹಾಲಿನ ಲಾರಿಯಲ್ಲಿ ತೆರಳುತ್ತಿದ್ದ ದಂಪತಿ ಬಾಳೆಹೊನ್ನೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅವರಿಗೆ ಬುದ್ಧಿವಾದ ಹೇಳಿ ವಾಪಸ್ ಶೃಂಗೇರಿಗೆ ಕಳುಹಿಸಲಾಗಿದೆ. ಲಾರಿ ಚಾಲಕನಿಗೆ ಎಚ್ಚರಿಕೆ ನೀಡಲಾಗಿದೆ.
ಶೃಂಗೇರಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವ ದಂಪತಿ ಹಾಸನಕ್ಕೆ ತೆರಳಲು ಶಿವಮೊಗ್ಗ ಹಾಲು ಒಕ್ಕೂಟದ ಲಾರಿಯ ಚಾಲಕನಿಗೆ ಹಣ ಕೊಟ್ಟು ವ್ಯವಸ್ಥೆ ಮಾಡಿಕೊಂಡಿದ್ದರು. ಶೃಂಗೇರಿಯಿಂದ ಹೊರಟ ಲಾರಿ ಚಾಲಕ ಜಯಪುರ ಮತ್ತು ಬಾಳೆಹೊನ್ನೂರಿನ 2 ಚೆಕ್ಪೋಸ್ಟ್ಗಳನ್ನು ಪೊಲೀಸರ ಕಣ್ತಪ್ಪಿಸಿ ಕರೆದುಕೊಂಡು ಬಂದಿದ್ದಾನೆ. ಬಾಳೆಹೊನ್ನೂರು ಜೇಸಿ ವೃತ್ತ ದಾಟಿದ ಬಳಿಕ ದಂಪತಿಯನ್ನು ಕೆಳಗೆ ಇಳಿಸಿದ ಲಾರಿ ಚಾಲಕ, ರೋಟರಿ ವೃತ್ತದಲ್ಲಿ ಚೆಕ್ಪೋಸ್ಟ್ ಇದೆ. ನೀವು ಮುಂದೆ ನಡೆದುಕೊಂಡು ಹೋಗಿ, ಅರ್ಧ ಗಂಟೆ ನಂತರ ಚೆಕ್ಪೋಸ್ಟ್ ದಾಟಿ ಬಂದು ನಿಮ್ಮನ್ನು ವಾಹನಕ್ಕೆ ಹತ್ತಿಸಿಕೊಳ್ಳುತ್ತೇನೆ ಎಂದಿದ್ದಾನೆ. ಇದು ಚೆಕ್ಪೋಸ್ಟ್ನಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬಂದಿದೆ. ಲಾರಿ ಹೊರಡುವ ವೇಳೆ ಸಿಬ್ಬಂದಿ ಫಾಲೋ ಮಾಡಿದ್ದು, ಭದ್ರಾ ಸೇತುವೆ ಸಮೀಪ ಚಾಲಕ ಲಾರಿ ನಿಲ್ಲಿಸಿ ದಂಪತಿಯನ್ನು ಹತ್ತಿಸಿಕೊಳ್ಳುವಾಗ ಅವರನ್ನು ಹಿಡಿದಿದ್ದಾರೆ.