ಇಬ್ಬರು ಮಕ್ಕಳ ಅಪಹರಣ ಮಾಡಿದ್ದ ದಂಪತಿ ಸೆರೆ: ಬಿಹಾರಕ್ಕೆ ಕರೆದೊಯ್ಯಲು ಸಜ್ಜಾಗಿದ್ದ ಆರೋಪಿಗಳು

arrested
Published on

ಬೆಂಗಳೂರು: ಮನೆಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ಅಹರಣ ಮಾಡಿದ್ದ ದಂಪತಿಯನ್ನು ಕೊಡುಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಪ್ರಮೀಳಾ ದೇವಿ (33) ಮತ್ತು ಬಲರಾಮ್(40) ಬಂಧಿತರು.
ಪ್ರಮೀಳಾ ದೇವಿ ಮತ್ತು ಬಲರಾಮ್ ದಂಪತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎಂಟು ತಿಂಗಳ ಮಗುವನ್ನು ಕಳ್ಳತನ ಮಾಡಿ ಯಶವಂತಪುರ ರೈಲ್ವೇ ಸ್ಟೇಷನ್‌ನಿಂದ ಬಿಹಾರಕ್ಕೆ ತೆರಳಲು ಸಜ್ಜಾಗಿದ್ದರು. ರಾತ್ರಿ 11.30 ರ ಸುಮಾರಿಗೆ ಮಕ್ಕಳು ಜೋರಾಗಿ ಅಳುತ್ತಿದ್ದವು. ಜತೆಗೆ ದಂಪತಿ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ರೈಲ್ವೆ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಮಕ್ಕಳು ನಮದಲ್ಲ ಎಂದು ತಿಳಿಸಿದ್ದು, ಆಗ ಮಕ್ಕಳ ಕಳ್ಳತನದ ಕೃತ್ಯ ಬಯಲಾಗಿದೆ. ಮತ್ತೊಂದೆಡೆ ಮಕ್ಕಳನ್ನು ಕಳೆದುಕೊಂಡ ಪಾಲಕರು ತೀವ್ರ ಹುಡುಕಾಟ ನಡೆಸಿ ಮಕ್ಕಳು ಸಿಗದಿದ್ದಾಗ ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಬಳಿಕ ಆರೋಪಿಗಳಿಂದ ರಕ್ಷಿಸಲಾದ ಮಕ್ಕಳು ಹಾಗೂ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಲ್ಲದೇ ಹಿನ್ನೆಲೆಯಲ್ಲಿ ಅಪಹರಣ:
ಬಿಹಾರ ಮೂಲದ ದಂಪತಿ ನಗರದಲ್ಲಿ ಟೈಲ್ಸ್ ಕೆಲಸ ಮತ್ತು ಮನೆಗೆಲಸ ಮಾಡಿಕೊಂಡಿದ್ದರು. ಇವರಿಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ಈ ಎರಡು ಮಕ್ಕಳನ್ನು ಅಪಹರಣ ಮಾಡಿ ತಮ್ಮ ಊರಿಗೆ ಕರೆದೊಯ್ದು ಸಾಕುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಮಕ್ಕಳು ಅಪಹರಿಸುವ ಗ್ಯಾಂಗ್‌ನವರಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಅಪಹರಣವಾಗಿದ್ದ ಮಕ್ಕಳು ಮತ್ತೆ ತಾಯಿಯ ಮಡಿಲು ಸೇರಿವೆ.
ಅಪಹರಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ:
ಬೆಳಗ್ಗೆ ೧೧.೩೦ ವೇಳೆ ರಸ್ತೆ ಬದಿ ಆಟವಾಡುತ್ತಾ ಕುಳಿತ್ತಿದ್ದ ವೇಳೆ ಮಹಿಳೆಯೊಬ್ಬರು ೬ ವರ್ಷದ ಮಗುವಿನ ಬಳಿ ವಿಳಾಸ ಕೇಳುವ ನೆಪದಲ್ಲಿ ಬಂದು ಮಾತನಾಡಿಸಿ, ಬಳಿಕ ತಿಂಡಿಯ ಆಮೀಷವೊಡ್ಡಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net