ನಿತ್ಯ ನರಕ ಅನುಭವಿಸ್ತಿದ್ದ ಯುವತಿಯನ್ನು ದತ್ತು ಪಡೆದು ಮದ್ವೆ ಮಾಡಿಕೊಟ್ಟು ಮಾನವೀಯತೆ ಮೆರೆದ ದಂಪತಿ!

Humanity Couple
Published on

ಪಜಯನ್ನು (ತಿಸ್ಸೂರ್​): ದಿನವಿಡಿ ಬರೀ ಚಿತ್ರಹಿಂಸೆಯನ್ನೇ ಅನುಭವಿಸುತ್ತಿದ್ದ ಸೂರ್ಯಪ್ರಭಾ ಎಂಬ ಯುವತಿಯ ಬಾಳಲ್ಲಿ ಕಷ್ಟದ ಕತ್ತಲೆ ಕವಿದು ಇದೀಗ ಬೆಳಕಿನ ಚಿತ್ತಾರ ಮೂಡಿದೆ. ತುಂಬಾ ಪ್ರೀತಿಸುವ ತಂದೆ-ತಾಯಿಯನ್ನು ಪಡೆದುಕೊಂಡ ಸೂರ್ಯಪ್ರಭಾಗೆ ಜೀವನದುದ್ದಕ್ಕೂ ಜತೆಯಾಗಿ ನಡೆಯುವ ಒಳ್ಳೆಯ ಹುಡುಗನನ್ನು ಕೈಹಿಡಿದಿದ್ದು, ಆಕೆಯ ಜೀವನವೇ ಸಂಪೂರ್ಣ ಬದಲಾವಣೆಯಾಗಿದೆ.

ಹದಿನೆಂಟು ವರ್ಷದ ಸೂರ್ಯಪ್ರಭಾ ಮೂಲತಃ ಕೊಂಡಾಜಿ ನಿವಾಸಿ. ವರ್ಷಗಳ ಹಿಂದೆಯೇ ತನ್ನ ತಂದೆಯನ್ನು ಕಳೆದುಕೊಂಡಿರುವ ಆಕೆ ತಾಯಿ ಮತ್ತು ಮಲತಂದೆಯ ಆಶ್ರಯದಲ್ಲಿದ್ದಳು. ಆದರೆ, ಆಕೆಯ ಜೀವನ ಹೂವಿನ ಮೇಲಿನ ನಡಿಗೆಯಂತಿರದೆ, ಮುಳ್ಳಿನ ಮೇಲಿನ ನಡಿಗೆಯಂತಿತ್ತು. ಏಕೆಂದರೆ ತಾಯಿ ಮತ್ತು ಮಲತಂದೆ ನಿತ್ಯವು ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದಲೇ ಆರಂಭವಾಗುವ ದಿನ ಕಿರುಕುಳದಿಂದ ಅಂತ್ಯವಾಗುತ್ತಿತ್ತು.

ಸೂರ್ಯಪ್ರಭಾಳ ಕಷ್ಟ ನೋಡಿದ ಸ್ಥಳೀಯರು ತಿಂಗಳ ಹಿಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಮಲತಂದೆಯನ್ನು ವಶಕ್ಕೆ ಪಡೆದಿದ್ದರು. ಸೂರ್ಯಪ್ರಭಾಳನ್ನೂ ಜತೆಯಲ್ಲಿಯೇ ಕರೆತಂದಿದ್ದರು. ದಿನ ನಿತ್ಯವು ನರಕ ದರ್ಶನ ಮಾಡುತ್ತಿದ್ದ ಸೂರ್ಯಪ್ರಭಾ ಮತ್ತೆ ಮನೆಗೆ ಹೋಗಲು ನಿರಾಕರಿಸಿದಳು.

ಇನ್ನೊಂದೆಡೆ ಮಕ್ಕಳಿಲ್ಲದ ದಂಪತಿ ಶಿವದಾಸನ್​ ಮತ್ತು ನಿಶಾ ಸೂರ್ಯಪ್ರಭಾಳ ಮಾಹಿತಿ ತಿಳಿದು ಆಕೆಗೆ ನೆರವು ನೀಡಲು ಪೊಲೀಸ್​ ಠಾಣೆಗೆ ಆಗಮಿಸಿದರು. ಇದಕ್ಕೂ ಮುನ್ನ ಸೂರ್ಯಪ್ರಭಾ, ಪಜಯನ್ನೂನಲ್ಲಿರುವ ಶಿವದಾಸನ್​ ದಂಪತಿಯ ವ್ಹೀಲರ್​ ಶಾಪ್​ನಲ್ಲಿ ಕೆಲ ದಿನಗಳವರೆಗೆ ಕೆಲಸ ಮಾಡಿದ್ದಳು. ಆಗಲೇ ನಿಶಾ ಅವರು ಸೂರ್ಯಪ್ರಭಾಳನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು. ಎಲ್ಲ ವಿಷಯ ತಿಳಿದ ಬಳಿಕ ಪೊಲೀಸ್​ ಅಧಿಕಾರಿಗಳ ಮನವಿ ಮಾಡಿಕೊಂಡ ದಂಪತಿ, ಸೂರ್ಯಪ್ರಭಾಳನ್ನು ದತ್ತು ಪಡೆದು ತಮ್ಮೊಂದಿಗೆ ಕರೆದೊಯ್ದರು.

ಇದೇ ವೇಳೆ ಸೂರ್ಯಪ್ರಭಾಳ ಬಗ್ಗೆ ತಿಳಿದ ತಿರುವಿಲ್ವಮಲಾ ನಿವಾಸಿ ಮನೋಜ್​ ಆಕೆಯನ್ನು ಮದುವೆಯಾಗಲು ಮುಂದೆ ಬಂದ. ಇದನ್ನು ತಿಳಿದ ಶಿವದಾಸನ್​ ದಂಪತಿ ಮದುವೆ ಸಿದ್ಧತೆ ಮಾಡಿ, ವಿವಾಹವನ್ನೂ ಮಾಡಿಕೊಟ್ಟಿದ್ದಾರೆ. ಕಾರ್ಪೆಂಟರ್​ ಆಗಿರುವ ಶಿವದಾಸನ್​ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೂರ್ಯಪ್ರಭಾಳಿಗೆ ಆಭರಣಗಳನ್ನು ಮಾಡಿಸಿಕೊಟ್ಟಿದ್ದಾರೆ. ಕೊಡತೂರ್​ ಭಗವತಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆಯಿತು. ಮಾನವೀಯತೆ ಮರೆಯಾಗುತ್ತಿರುವ ಕಾಲದಲ್ಲಿ ಶಿವದಾಸನ್​ ದಂಪತಿ ಮತ್ತು ಮನೋಜ್​, ಸೂರ್ಯಪ್ರಭಾಳ ಬಾಳಿನಲ್ಲಿ ಹೊಸ ಬೆಳಕು ತರುವ ಮೂಲಕ ಮನುಷ್ಯತ್ವ ಮೆರೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net