ಮುಡಾ ಹಗರಣ ಚರ್ಚೆಗೆ ಪಟ್ಟು; ಮೇಲ್ಮನೆಯಲ್ಲಿ ಅಹೋರಾತ್ರಿ ಧರಣಿ

bjp
Published on

ಬೆಂಗಳೂರು:
ಮುಡಾ ಪ್ರಕರಣ ನಿಲುವಳಿ ಸೂಚನೆ ಪ್ರಸ್ತಾಪ ತಿರಸ್ಕರಿಸಿರುವುದನ್ನ ಪುನರ್ ಪರಿಶೀಲಿಸುವಂತೆ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದು ಮೇಲ್ಮನೆಯಲ್ಲಿ ಸಭಾಪತಿ ಪೀಠದ ಎದುರು ಧರಣಿ ನಡೆಸಿದ್ದರಿಂದ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಲಾಯಿತಾದರೂ, ಮುಡಾ ಚರ್ಚೆಗೆ ಪಟ್ಟು ಹಿಡಿದು, ವಿರೋಧ ಪಕ್ಷ ಅಹೋರಾತ್ರಿ ಧರಣಿ ಪ್ರಾರಂಭಿಸಿತು.
ಈಗಾಗಲೇ ನಿಲುವಳಿ ಸೂಚನೆ ತಿರಸ್ಕರಿಸಿದ್ದೇನೆ. ರೂಲಿಂಗ್ ಕೊಟ್ಟ ಮೇಲೆ ಮುಗಿತು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರೂ, ವಿರೋಧ ಪಕ್ಷ ಒಪ್ಪಲಿಲ್ಲ.
ನಿಲುವಳಿ ಸೂಚನೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಪಟ್ಟ ಹಿಡಿದಿದ್ದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಸಿಎಂ ತಮ್ಮ ಪತ್ನಿ ಹೆಸರಿಗೆ 14 ನಿವೇಶನ ಪಡೆದಿದ್ದಾರೆ. ಈ ಬಗ್ಗೆ ಚರ್ಚೆ ಮಾಡಬಾರದೇ? ನೀವು ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪಾಯಿಂಟ್ ಆ್ ಆರ್ಡರ್ ಎತ್ತಿದ ಬಿಜೆಪಿಯ ನವೀನ್, ನಿಯಮ ಏನಿದೆ ಅನ್ನುವುದನ್ನು ಓದುತ್ತೀನಿ ಎಂದರು. ನಾನು ಓದಿ ಸ್ಟಡಿ ಮಾಡಿಯೇ ರಿಜೆಕ್ಟ್ ಮಾಡಿದ್ದೇನೆ. ಅದನ್ನ ಬಿಟ್ಟು ಬೇರೆ ಹೇಳಿ ಎಂದು ಸಭಾಪತಿ ತಿಳಿಸಿದರು.
ವಾಲ್ಮಿಕಿ ಹಗರಣದ ಬಗ್ಗೆ ಮುಖ್ಯಮಂತ್ರಿ ಮೊನ್ನೆ ಪುಟಗಟ್ಟಲೇ ಓದಿದ್ದಾರೆ. ನಮ್ಮ ಒಂದು ಪೇಜಿನ ನಿಲುವಳಿ ಓದಬಾರದಾ? ಎಂದು ಬಿಜೆಪಿಯ ರವಿಕುಮಾರ್ ಕೇಳಿದರು.
ಸಭಾಪತಿಗಳ ಅಧಿಕಾರವನ್ನ ಪ್ರಶ್ನಿಸೋದು ಡಿಕ್ಟೇಕ್ಟರ್ ಶಿಪ್ ಎಂದ ಸಚಿವ ಬೋಸರಾಜು ಆಕ್ಷೇಪಿಸಿದರು. ನಿಮ್ಮ ಡಿಕ್ಟೇಕ್ಟರ್ ಶಿಪ್ ನಡೆಯಲ್ಲ ಎಂದು ಜೋರು ಧ್ವನಿಯಲ್ಲಿ ವಿರೋಧ ಪಕ್ಷ ಸದಸ್ಯರು ಹೇಳಿದರು.
ಮತ್ತೆ ನಿಯಮದ ಪುಸ್ತಕ ಹಿಡಿದು ಓದ್ತೀನಿ ಎಂದು ಬಿಜೆಪಿಯ ನವೀನ್ ಎದ್ದು ನಿಂತಾಗ, ನಿನಗಿಂತ ನಾನು ಬಹಳ ಓದಿದ್ದೇನೆ, ನಾನು ಓದುವಾಗ ನೀನು ಹುಟ್ಟಿರಲಿಲ್ಲ ಕೂತ್ಕೊ ಎಂದ ಸಭಾಪತಿ ಗರಂ ಆದರು.
ಈ ನಡುವೆ ಮಧ್ಯ ಪ್ರವೇಶಿಸಿದ ಸಿ.ಟಿ.ರವಿ, ನಿಲುವಳಿಯನ್ನ ಪುನರ್ ಪರಿಶೀಲಿಸಿ ಚರ್ಚೆಗೆ ಅವಕಾಶ ಕೊಟ್ಟ ಉದಾಹರಣೆಗಳಿವೆ. ಮುಖ್ಯಮಂತ್ರಿಗಳೇ ಹಗರಣದ ಸೂತ್ರದಾರ, ಪಾತ್ರದಾರ ಆಗಿರುವುದರಿಂದ ಇದು ರಾಜ್ಯಕ್ಕೆ ಕಳಂಕ ಆಗಬಾರದು, ಆಡಳಿತ ಪಕ್ಷಕ್ಕೂ ಆಗಬಾರದು. ಬೇಕಿದ್ದರೆ ಅವರು, ದಾಖಲೆ ಮೂಲಕ ನಿರ್ದೂಷಿ ಅಂತ ಸಾಬೀತು ಮಾಡಲು ಈ ಸದನಕ್ಕಿಂತ ದೊಡ್ಡ ವೇದಿಕೆ ಮತ್ತೊಂದಿಲ್ಲ ಎಂದು ವಾದಿಸಿದರು.
ಸಭಾಪತಿಗಳು ಒಮ್ಮೆ ರೂಲಿಂಗ್ ಕೊಟ್ಟ ಮೇಲೆ ಅದನ್ನ ಪ್ರಶ್ನಿಸುವಂತಿಲ್ಲ ಎಂದು ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ಸದಸ್ಯರ ವಾಗ್ದಾಳಿ ನಡೆಸಿದರು.
ನಿಮಗೆ ಬೇಡ ಅಂದ್ರೆ ನನ್ನ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿ ನಾನು ಎದ್ದು ಹೋಗ್ತೇನಿ ಎಂದು ತೀವ್ರ ಬೇಸರದಿಂದ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಆಗ ಎದ್ದುನಿಂತ ಕಾಂಗ್ರೆಸ್‌ನ ಪುಟ್ಟಣ್ಣ, ಇವರು ಕೇಂದ್ರ ತನಿಖಾ ಸಂಸ್ಥೆಯನ್ನ ಹೇಗೆ ದುರುಪಯೋಗ ಪಡಿಸಿಕೊಂಡರು ಎನ್ನುವುದು ಗೊತ್ತಿದೆ. ಅದೇ ರೀತಿ ಸಭಾಪತಿ ಪೀಠವನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನ ಪಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಮಾತನಾಡಿ, ಸಿಎಂ, ದಲಿತರ ಜಮೀನನ್ನ ಖರೀದಿ ಮಾಡಿದ್ದೆ ಮಹಾಪರಾದ. ದಲಿತರ ಜಮೀನನ್ನ ಅಕ್ರಮ ಡಿನೋಟಿಪೈ ಮಾಡಿದ್ದು ಎರಡನೇ ಅಪರಾದ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದದ ನಡುವೆ ಪರಸ್ಪರ ಧಿಕ್ಕಾರಗಳ ಘೋಷಣೆಗಳನ್ನು ಕೂಗಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಬಿಜೆಪಿ ಸದಸ್ಯರು ೋಷಣೆ ಕೂಗಿ ಭಿತ್ತಿಪತ್ರ ಪ್ರದರ್ಶಿಸಿದರೆ, ಭ್ರಷ್ಟ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದ ಆಡಳಿತ ಪಕ್ಷದ ಸದಸ್ಯರು ೋಷಣೆ ಕೂಗಿದರು.
ಜೆಡಿಎಸ್‌ನ ಬೋಜೇಗೌಡ ಮಾತನಾಡಿ, ಸಿಎಂ ಮೇಲೆ ಆಗಾದವಾದ ಗೌರವವಿದೆ. ಅವರು ನಿರ್ದೋಷಿ ಎಂದು ಹೊರ ಬರಲಿ ಎನ್ನುವುದು ನಮ್ಮನಿರೀಕ್ಷೆ ಎಂದಾಗ ಕೆರಳಿದ ಸಚಿವರು ಮತ್ತು ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ದೋಷಿನೇ ಆಗಿಲ್ಲ ಎಂದಾದ ಮೇಲೆ ನಿರ್ದೋರ್ಷಿ ಹೆಂಗ್ ಆಗುತ್ತೆ ಎಂದು ವಾದಿಸಿದರು.
ಮತ್ತೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದನವನ್ನು ಮುಂದೂಡಿ ಮತ್ತೆ ಸಮಾವೇಶವಾದಾಗಲೂ ಪ್ರತಿಭಟನೆ ನಿಲ್ಲಲಿಲ್ಲ.
ಈ ನಡುವೆ ನಿರ್ಣಯ ಮರುಪರಿಶೀಲನೆಗೆ ವಿರೋಧ ಪಕ್ಷದ ಸದಸ್ಯರು ಮತ್ತೊಮ್ಮೆ ಸಭಾಪತಿಗೆ ಮನವಿ ಸಲ್ಲಿಸಿದರು. ನಾಳೆ ಈ ಬಗ್ಗೆ ನಿರ್ಣಯ ತಿಳಿಸುತ್ತೇನೆ ಎಂದರೂ ವಿರೋಧ ಪಕ್ಷದ ಸದಸ್ಯರು ಒಪ್ಪಲಿಲ್ಲ. ಆರೋಪ ಪ್ರತ್ಯಾರೋಪ ಸುರಿಮಳೆಯೇ ನಡೆಯಿತು.
ಗದ್ದಲದ ನಡುವೆಯೇ ಗಮನ ಸೆಳೆಯುವ ಸೂಚನೆ ಚರ್ಚೆಗೆ ಸಭಾಪತಿ ಅವಕಾಶ ನೀಡಿದರು. ಯು ಬಿ ವೆಂಕಟೇಶ್ ಸೂಚನೆ ಪ್ರಸ್ತಾಪಿಸುವಾಗಲೂ ಭಾರಿ ಗದ್ದಲ ಇದ್ದ ಕಾರಣ ಸಭಾಪತಿ ಬಸವರಾಜ ಹೊರಟ್ಟಿ ಅವರು ಅನಿವಾರ್ಯವಾಗಿ ಸದನವನ್ನು ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net