

ಬೆಂಗಳೂರು: ಹೊಸ ರೇಷನ್ ಕಾರ್ಡ್ಗಳು ಸಿಗದೆ ಸರ್ಕಾರಿ ಸೌಲಭ್ಯ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ. ಪ್ರತಿ ತಿಂಗಳು ಇಲಾಖೆಗೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆಯಾದರೂ ಆಹಾರ ನಿರೀಕ್ಷಕರು ಅವುಗಳನ್ನು ವಿಲೇ ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಉಚಿತ ಚಿಕಿತ್ಸೆ ಸೇರಿ ಇನ್ನಿತರ ಸೌಲಭ್ಯಗಳು ಸಿಗಲಿವೆ. ಆದರೆ, ಅರ್ಜಿ ಸಲ್ಲಿಸಿ ಮುರ್ನಾಲ್ಕು ವರ್ಷ ಕಳೆದರೂ ಕಾರ್ಡ್ ಸಿಗುತ್ತಿಲ್ಲ ಇದರಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳು ಪರದಾಡುವಂತಾಗಿದೆ.
ಮತ್ತಷ್ಟು ವಿಳಂಬ?: 2017-21ರವರೆಗೆ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ಗಾಗಿ 39,02,745 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 34,97,529 ಅರ್ಜಿಗಳ ವಿಲೇಯಾಗಿವೆ. 4,05,216 ಅರ್ಜಿಗಳು ಬಾಕಿ ಉಳಿದಿವೆ. ಕರೊನಾ ಹಿನ್ನೆಲೆಯಲ್ಲಿ ಹೊಸ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು 2 ವರ್ಷ ಹಿಂದೆಯೇ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಇದೀಗ ಕರೊನಾ ಕೇಸ್ಗಳು ಕಡಿಮೆಯಾಗಿದ್ದು, ಎಲ್ಲ ಆರ್ಥಿಕ ಚಟುವಟಿಕೆಗಳು ಯಥಾಸ್ಥಿತಿಗೆ ಮರಳಿವೆಯಾದರೂ ಇಲಾಖೆ ಮಾತ್ರ ಹೊಸ ರೇಷನ್ ಕಾರ್ಡ್ ಮಂಜೂರು ಮಾಡುವ ಸಂಬಂಧ ಸುತ್ತೋಲೆ ಹೊರಡಿಸಲು ನಿರ್ಲಕ್ಷ್ಯವಹಿಸಿದೆ. ರೇಷನ್ ಕಾರ್ಡ್ಗೆ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರ ಕಡ್ಡಾಯ. ನಿಯಮ ಪ್ರಕಾರ ಎಲ್ಲ ದಾಖಲೆಗಳು ಸರಿಯಿದ್ದರೆ 15-20 ದಿನದೊಳಗೆ ಅರ್ಜಿದಾರರ ವಿಳಾಸಕ್ಕೆ ಕಾರ್ಡ್ ಪ್ರಿಂಟ್ ಆಗಿ ಅಂಚೆ ಮೂಲಕ ಬರಬೇಕು. ಆದರೆ, ಮೂರು ವರ್ಷವಾದರೂ ಅರ್ಜಿದಾರರಿಗೆ ಕಾರ್ಡ್ ಸಿಕ್ಕಿಲ್ಲ.
ಪ್ರಕ್ರಿಯೆ ಹೇಗೆ?: ಗ್ರಾಮೀಣ ಭಾಗದಲ್ಲಿ ಅರ್ಜಿದಾರರು ಗ್ರಾಮ ಪಂಚಾಯಿತಿಯಲ್ಲಿ ಹಾಗೂ ನಗರದಲ್ಲಿ ಅರ್ಜಿದಾರರು ಬೆಂಗಳೂರು ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕು. ಆನಂತರ, ಕುಟುಂಬದ ಪ್ರತಿ ಸದಸ್ಯರ ಆಧಾರ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರದ ಮಾಹಿತಿಯನ್ನು ಆನ್ಲೈನ್ನಲ್ಲಿ ನಮೂದಿಸಿದ ಬಳಿಕ ಅರ್ಜಿದಾರರಿಗೆ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ. ಇದನ್ನು ಅರ್ಜಿದಾರರು ಜಿಲ್ಲೆಯ ಆಹಾರ ಇಲಾಖೆ ಕಚೇರಿಗೆ ಸ್ವೀಕೃತಿ ಪತ್ರ ನೀಡಿ ನಮೂದಿಸಿಕೊಳ್ಳಬೇಕು. ಅರ್ಜಿದಾರರು ನೀಡಿರುವ ಮೊಬೈಲ್ ಸಂಖ್ಯೆಗೆ ಮೂರು ದಿನದಲ್ಲಿ ಅರ್ಜಿ ದೃಢೀಕರಣವಾಗಿದೆ ಎಂಬ ಸಂದೇಶ ಬರಲಿದೆ.
ರಾಜ್ಯಾದ್ಯಂತ ಬಾಕಿ ಇರುವ ಅರ್ಜಿಗಳ ವಿಲೇಗೆ ಶೀಘ್ರ ಕ್ರಮಕೈಗೊಳ್ಳುತ್ತೇವೆ. ಕರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸದ್ಯ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ.
| ಶಮ್ಲಾ ಇಕ್ಬಾಲ್ ಆಹಾರ ಇಲಾಖೆ ಆಯುಕ್ತೆ
ಹೊಸ ರೇಷನ್ ಕಾರ್ಡ್ ಯಾವಾಗ ಮಂಜೂರು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಪ್ರತಿ ನಿತ್ಯ ನೂರಾರರು ಕರೆಗಳು ಬರುತ್ತೇವೆ. ಆದಷ್ಟು ಬೇಗ ಬಾಕಿ ಅರ್ಜಿಗಳ ವಿಲೇಗೆ ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕು. ಕಾರ್ಡ್ದಾರರಿಗೆ ರೇಷನ್ ವಿತರಣೆಕ್ಕಾಗಿ ನೀಡುವ ಕಮಿಷನ್ ಹಣವನ್ನು ಸರ್ಕಾರ 5 ತಿಂಗಳಿಂದ ಬಾಕಿ ಉಳಿಸಿಕೊಂಡಿದೆ.
| ಕೆ.ಎನ್.ವಿಜಯ ಕುಮಾರ್ ರಾಜ್ಯ ಪಡಿತರ ವಿತರಕ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ
ಇಲಾಖೆ ಹೇಳೋದೇನು?: ಕರೊನಾ ನಿಯಂತ್ರಿಸಲು ಲಾಕ್ಡೌನ್ ಘೋಷಿಸಿದ ಕಾರಣ ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳ ಸ್ಥಳ ಪರಿಶೀಲನಾ ಕಾರ್ಯದಲ್ಲಿ ವಿಳಂಬವಾಗಿದೆ. ಪ್ರಸ್ತುತ ಸ್ಥಳ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಕರೊನಾ 2ನೇ ಅಲೆಯ ಕಾರಣ ಸಾರ್ವಜನಿಕರ ಆರೋಗ್ಯ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಮೇ ತಿಂಗಳಿಂದ ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ, ಸೇರ್ಪಡೆ, ಪಡಿತರ ಚೀಟಿ ವರ್ಗಾವಣೆ ಸೇರಿ ಮುಂತಾದ ಪ್ರಕ್ರಿಯೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಸಕಾಲ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇಗೆ ಮತ್ತು ತುರ್ತು ಸಂದರ್ಭಗಳಲ್ಲಿ ವಿಲೇವಾರಿಗೆ ಅವಕಾಶ ಕಲ್ಪಿಸಲಾಗಿದೆ.