ಮತ್ತಿಗಾಗಿ ಕೆಮ್ಮಿನ ಔಷಧ ಕುಡಿಯುತ್ತಿದ್ದ... ಅದಕ್ಕಾಗಿ ಬ್ಯಾಂಕ್ ಲೂಟಿ ಮಾಡಿದ !

harjot
Published on

ಚಂಡೀಗಡ: ಮತ್ತಿಗಾಗಿ ದಿನಕ್ಕೆ ಮೂರು ನಾಲ್ಕು ಬಾಟಲಿ ಕಾಫ್ ಸಿರಪ್ ಕುಡಿಯುವುದನ್ನೇ ಚಟ ಮಾಡಿಕೊಂಡಿದ್ದವ, ಅದಕ್ಕಾಗಿ ದುಡ್ಡು ಸಾಲದೇ ಬ್ಯಾಂಕ್ ಲೂಟಿ ಮಾಡಿದ್ದಾನೆ. ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಈತ ಲಾಕ್​ಡೌನಿನಲ್ಲಿ ಕೆಲಸ ಕಳೆದುಕೊಂಡಿದ್ದರ ಪರಿಣಾಮ ಹೆಚ್ಚಿನ ಒತ್ತಡದಲ್ಲಿದ್ದ ಎನ್ನಲಾಗಿದೆ.

ಫೆಬ್ರವರಿ 8 ರಂದು ಚಂಡೀಗಡದ ಮೊಹಾಲಿಯ ನಿವಾಸಿ ಹರಜೋತ್ ಸಿಂಗ್ ಮುಸುಕು ಧರಿಸಿ, ಹಾಡುಹಗಲೇ ಚಂಡೀಗಡ ಸ್ಟೇಟ್ ಕೋಆಪರೇಟೀವ್ ಬ್ಯಾಂಕ್​ ಪ್ರವೇಶಿಸಿದ. ಆಟದ ಪಿಸ್ತೂಲು ತೋರಿಸಿ 8.65 ಲಕ್ಷ ರೂಪಾಯಿ ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದ. ಎರಡೇ ದಿನಗಳಲ್ಲಿ ಪೊಲೀಸರು ಅವನನ್ನು ಪತ್ತೆ ಹಚ್ಚಿದರು. ವಿಚಾರಣೆ ನಡೆಸಿದಾಗ ಬಿ.ಫಾರ್ಮ ಪದವೀಧರನಾದ 34 ವರ್ಷದ ಸಿಂಗ್, ಲಾಕ್​ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿದ್ದ, ತನ್ನ ವಿಚಿತ್ರ ಚಟಕ್ಕೆ ಹಣ ಬೇಕೆಂದು ಈ ಅಪರಾಧಕ್ಕೆ ಕೈಹಾಕಿದ ಎಂಬುದು ಬೆಳಕಿಗೆ ಬಂತು.

ಸಿಂಗ್​​ಗೆ ದಿನಕ್ಕೆ 3-4 ಬಾಟಲಿ ಕಾಫ್ ಸಿರಪ್ ಕುಡಿಯುವ ಅಭ್ಯಾಸ. ಇದನ್ನು ಕೊಳ್ಳಲು ಅವನಿಗೆ 1,400 ರೂಪಾಯಿ ವೆಚ್ಚವಾಗುತ್ತಿತ್ತು. ಈ ಚಟದ ನಿವಾರಣೆಗೆ ಮನೆಯವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಮೇಲಾಗಿ ಕರೊನಾ ಹಿನ್ನೆಲೆಯಲ್ಲಿ 2020 ರಲ್ಲಿ ಲಾಕ್​ಡೌನ್​ ವಿಧಿಸಿದಾಗ ಇವನು ಕೆಲಸ ಕಳೆದುಕೊಂಡ. ಮನೆಯವರು ಅವನ ಚಟ ಪೂರೈಸಿಕೊಳ್ಳಲು ಹಣ ನೀಡದಿದ್ದಾಗ ತನ್ನ ಸೇವಿಂಗ್ಸ್​ನಿಂದ ಹಣ ತೆಗೆದು ಬಳಸಲಾರಂಭಿಸಿದ. ಅದೂ ಖಾಲಿಯಾದಾಗ ಹಾಡುಹಗಲೇ ಬ್ಯಾಂಕ್ ಲೂಟಿ ಮಾಡಿ ಹಣ ಪಡೆಯಲು ಮುಂದಾದ.

ಹರಜೋತ್​ ಸಿಂಗ್ ಹೆಂಡತಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಕೆಲಸ ಮಾಡುತ್ತಿದ್ದರೆ, ಅವನ ತಂದೆ ಮತ್ತು ತಾತ ನಿವೃತ್ತ ಸರಕಾರಿ ಅಧಿಕಾರಿಗಳು. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದೆ ದಿಢೀರನೆ ಬ್ಯಾಂಕ್ ಲೂಟಿ ಮಾಡಿರುವ ವಿಚಿತ್ರ ನಡವಳಿಕೆ ಬಗ್ಗೆ ಮನೋಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮನೋವೈದ್ಯ ಡಾ.ರೋಶನ್ ಲಾಲ್, ಇದು ಪೋಸ್ಟ್ ಟ್ರಮಾಟಿಕ್ ಸ್ಟ್ರೆಸ್​ ಡಿಸಾರ್ಡರ್​ನ ಸೂಚನೆ ಎಂದಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಬಹಳ ಜನ ಉದ್ಯೋಗ ಕಳೆದುಕೊಂಡಿದ್ದು, ತಮ್ಮ ಬದಲಾದ ಸನ್ನಿವೇಶವನ್ನು ನಿಭಾಯಿಸಲು ಸಾಧ್ಯವಾಗದ ಕೆಲವರು ಸಣ್ಣ ಅಪರಾಧಗಳಲ್ಲಿ ತೊಡಗುತ್ತಿರುವುದು ಕಂಡುಬಂದಿದೆ ಎಂದಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net