

ನಂಜನಗೂಡು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ರಾಮಸ್ವಾಮಿ ಬಡಾವಣೆ ಸಾಹಿತ್ಯ ಕೂಟದಿಂದ ‘ತಿಂಗಳ ಬೆಳಕು’ ಶೀರ್ಷಿಕೆಯಡಿ ‘ಮನೆಮದ್ದಿನಿಂದ ಆರೋಗ್ಯ’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ರಾಮಸ್ವಾಮಿ ಬಡಾವಣೆ ಸಾಹಿತ್ಯ ಕೂಟದ ಸಂಚಾಲಕಿ ಶೋಭಾ ನಾಗಶಯನ ಮಾತನಾಡಿ, ಸಣ್ಣ ಈರುಳ್ಳಿ ಹಾಗೂ ಜೀರಿಗೆಯ ಉಪಯೋಗಗಳನ್ನು ತಿಳಿಸಿದರೆ, ಗಾಯಕರಾದ ಸುಪ್ರಿಯಾ ರಘು ವೀಳ್ಯೆದೆಲೆ, ಶುಂಠಿ, ತುಂಬೆಎಲೆ ಮಿಶ್ರಣ ಮಾಡಿ ರಸ ಸೇವಿಸಿದರೆ ಕೆಮ್ಮು ಶಮನವಾಗುತ್ತದೆ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಶ್ರೀಧರಿ ಗಂಗಾಧರ್ ಮಾತನಾಡಿ, ವಾರಕ್ಕೆ ಒಂದು ಸಾರಿ ಎಣ್ಣೆ ಸ್ನಾನ ಮಾಡಬೇಕು. ಚಿಕ್ಕ ಮಕ್ಕಳಿಗೆ ಬರುವ ಜ್ವರಕ್ಕೆ ನಾಗದಾಳಿ ಸೊಪ್ಪು ವೀಳ್ಯೆದೆಲೆ, ತುಳಸಿ ಮೂರನ್ನೂ ಅರೆದು ರಸ ಕುಡಿಸಿ ಆ ಸೊಪ್ಪುನ್ನು ಪಕ್ಕೆಗೆ ತಿಕ್ಕಿದರೆ ಜ್ವರ ವಾಸಿಯಾಗುತ್ತದೆ ಎಂದರು.
ಎರಡು ನೆಲ್ಲಿಕಾಯಿಯನ್ನು ಕತ್ತರಿಸಿ ಅದಕ್ಕೆ ಎರಡು ಕಾಳು ಮೆಣಸು, ಸ್ವಲ್ಪ ಶುಂಠಿ ಹಾಕಿ ಮಿಕ್ಸಿಗೆ ಹಾಕಿ ಅದನ್ನು ಶೋಧಿಸಿ ಎರಡು ದಿನಕ್ಕೊಮ್ಮೆ ಕುಡಿಯಬೇಕು. ಅದರಿಂದ ಕೂದಲು ಉದುರುವುದು ತಪ್ಪುತ್ತದೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು ಎಂದರು.
ನೃತ್ಯ ಕಲಾವಿದೆ ರಶ್ಮಿ ಶ್ರೀನಿಧಿ ಮಾತನಾಡಿ, ಚಿಕ್ಕ ಮಕ್ಕಳಲ್ಲಿ ಕಂಡುಬರುವ ಹೊಟ್ಟೆ ಉಬ್ಬರ ಹಾಗೂ ನೋವು ಪರಿಹಾರಕ್ಕೆ ಹರಳೆಣ್ಣೆ ಯೊಂದಿಗೆ ಎಲೆ ಕಾಯಿಸಿ ಲೇಪನ ಮಾಡಬೇಕು. ಮೊಡವೆಗೆ ಪರಿಹಾರ ಪುದಿನಾ ಹಾಗೂ ಕೊತ್ತಂಬರಿ ಸೊಪ್ಪಿನ ಲೇಪನ ಮತ್ತು ಮಂಡಿ ನೋವಿಗೆ ಹುಣಸೆ ಬೀಜವನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿ ಬಿಸಿಲಿನಲ್ಲಿ ಒಣಗಿಸಿ, ಹುರಿದು ಪುಡಿ ಮಾಡಿ ಪ್ರತಿದಿನ ಬೆಳಗ್ಗೆ ನೀರಿನೊಂದಿಗೆ ಕುಡಿಯುವುದು ಹಾಗೂ ಡಸ್ಟ್ ಅಲರ್ಜಿಗೆ ಶುಂಠಿ ಮತ್ತು ಬೆಳ್ಳುಳ್ಳಿ ರಸ ಜೇನುತುಪ್ಪದೊಂದಿಗೆ ಸೇವನೆ ಮಾಡುವುದು ಡಸ್ಟ್ ಅಲರ್ಜಿಗೆ ರಾಮಬಾಣ ಎಂದರು.
ಭಜನಾ ಮಂಡಳಿಯ ಮುಖ್ಯಸ್ಥೆ ಅಲಮೇಲು ಸೋಮಸುಂದರ್ ಮಾತನಾಡಿ, ಹೊಟ್ಟೆ ನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ತೊಂದರೆಗೆ ಹೊಕ್ಕಳಿಗೆ ಹರಳೆಣ್ಣೆ ಹಚ್ಚುವುದರಿಂದ ದೇಹಕ್ಕೆ ತಂಪು ಹಾಗೂ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಸೋಮಸುಂದರ್ ಮಾತನಾಡಿ, ಬಾಣಂತಿ ಲೇಹ ಮಾಡುವ ವಿಧಾನ ಹಾಗೂ ಉಪಯೋಗದ ಬಗ್ಗೆ ಹೇಳಿದರು.
ವಿಚಾರ ವೇದಿಕೆ ಅಧ್ಯಕ್ಷ ಜಗದೀಶ್ ಮಾತನಾಡಿ, ಧೂಳಿನಿಂದಾಗುವ ತೊಂದರೆಗಳಿಂದ ದೂರವಾಗಲು ಈರುಳ್ಳಿ ಮತ್ತು ಬೆಲ್ಲ ಸೇವಿಸಬೇಕು ಎಂದರು.
ತಗಡೂರು ಗೋಪಿನಾಥ್ ಮಾತನಾಡಿ, ಸಿರಿಧಾನ್ಯಗಳ ಉಪಯೋಗ , ಗಾಣದ ಎಣ್ಣೆಯಿಂದಾಗುವ ಪ್ರಯೋಜನಗಳು ಮತ್ತು ನಿರಂತರವಾಗಿ ಸೀನುವ ತೊಂದರೆ ಇದ್ದರೆ ಮೊಸರಿಗೆ ಈರುಳ್ಳಿ ಹಾಕಿ ಸೇವಿಸಿದರೆ ಆರೋಗ್ಯ ಉತ್ತಮವಾಗಲಿದೆ. ತೆಂಗಿನ ಹಾಲು ಮಕ್ಕಳಿಗೆ ಉತ್ತಮ ಆಹಾರ. ಹೀಗೆ ಹಲವಾರು ಮನೆಮದ್ದುಗಳ ಕುರಿತು ಹಾಸ್ಯಮಯವಾಗಿ ಹೇಳಿ ಎಲ್ಲರ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಯಶಸ್ವಿಯಾದರು.
ನಿವೃತ್ತ ಶಿಕ್ಷಕ ಅನಂತರಾಮ ಮಾತನಾಡಿ, ಕಣ್ಣು ಕುಟಿಕೆಗೆ ನಾಡಹೆಂಚನ್ನು ತೇಯ್ದು ಹಚ್ಚುವುದರಿಂದ ಸಮಸ್ಯೆ ಪರಿಹಾರ ಆಗಲಿದೆ. ತಲೆನೋವಿಗೆ ಮುತ್ತುಗದ ಎಲೆಗೆ ಹರಳೆಣ್ಣೆ ಹಚ್ಚಿ ಅದನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಕಟ್ಟಿಕೊಂಡು ಮಲಗಬೇಕು. ಮೂರು ದಿವಸ ನಿರಂತರವಾಗಿ ಹೀಗೆ ಮಾಡಿದರೆ ಮುಂದೆಂದೂ ತಲೆನೋವು ಬರುವುದೇ ಇಲ್ಲ. ಇದು ಸ್ವಯಂ ಅನುಭವ ಎಂದರು.
ಅಧ್ಯಕ್ಷತೆ ವಹಿಸಿದ್ದ ನಂಜನಗೂಡು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ನಂಜನಗೂಡು ಸತ್ಯನಾರಾಯಣ ಮಾತನಾಡಿ, ಎಲ್ಲರೂ ಅವರಿಗೆ ತಿಳಿದ ಮನೆಮದ್ದುಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಉದ್ದೇಶವೇ ಇದು. ನಾವು ತಿಳಿದಿರುವ ವಿಷಯವನ್ನು ಇನ್ನೊಬ್ಬರಿಗೆ ತಿಳಿಸುವುದು ಹಾಗೂ ಬೇರೆಯವರು ತಿಳಿದಿರುವ ವಿಷಯವನ್ನು ನಾವು ತಿಳಿದುಕೊಳ್ಳುವುದು. ಇದರಿಂದ ಜ್ಞಾನ ವೃದ್ಧಿಯಾಗುವುದರ ಜತೆಗೆ ನಮ್ಮಲ್ಲಿ ಮೌಲ್ಯಗಳು ಬೆಳೆಯುತ್ತವೆ. ಜನಸಂಪರ್ಕ ಸಾಧ್ಯವಾಗುತ್ತದೆ ಎಂದರು.