

ವಿಜಯವಾಣಿ ಸುದ್ದಿ ಜಾಲ ಮಂಗಳೂರು
ಕರ್ನಾಟಕ ಕರಾವಳಿ ಮತ್ತು ಚಿಕ್ಕಮಗಳೂರು ಸಂಸದರ ನಿಯೋಗವು ಮಂಗಳವಾರ ನವ ದೆಹಲಿಯ ರೈಲ್ವೆ ಭವನದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಬೇಟಿಯಾಗಿ ತಮ್ಮ ಭಾಗದ ರೈಲ್ವೇ ಸೇವೆಗಳ ಕುರಿತು ವಿಸ್ತಾರವಾಗಿ ಸಮಾಲೋಚನೆ ನಡೆಸಿತು.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ
ಜತೆ ಮಂಗಳೂರು ಸಂಸದರಾದ ಕಾಪ್ಟನ್ ಚೌಟ, ಬೆಂಗಳೂರು ಗ್ರಾಮಾಂತರ ಸಂಸದ ಡಾಕ್ಟರ್ ಮಂಜುನಾಥ್ ಇದ್ದರು.
ಕೊಂಕಣ ರೈಲ್ವೆ ವಿಲೀನದ ಕುರಿತು ಮುಂದಿನ ಹಂತದ ಬಗ್ಗೆ ಸಂಸದರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಪಾಲುದಾರಿಕೆ ಹೊಂದಿರುವ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಸರ್ಕಾರಗಳ ಶೇರು ಮರು ಖರೀದಿ ಪ್ರಕ್ರಿಯೆ ಸಂಬಂಧಿಸಿ ಅದಿಕಾರಿಗಳಿಗೆ ಕೆಲವು ನಿರ್ದೇಶನ ನೀಡಿದರು.
ಕರಾವಳಿಯ ಕಾರವಾರ, ಕುಂದಾಪುರ, ಉಡುಪಿ ಮಂಗಳೂರು ನಡುವೆ ಜನರ ಬಯಕೆಯಂತೆ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೆ ಪರಿಣಿತರಿಂದ ತಿಳಿಸಲ್ಪಟ್ಟ ಪರಿಹಾರವನ್ನು ನಿಯೋಗವು ಸಚಿವರ ಮುಂದಿಟ್ಟಿತು. ಅದರಂತೆ ಸಕಲೇಶಪುರ ಸುಬ್ರಮಣ್ಯ ನಡುವೆ ಹಳಿ ದ್ವಿಗುಣ, ಸುಬ್ರಮಣ್ಯ ಪಡೀಲ್ ಮಾರ್ಗದ ವೇಗ ಹೆಚ್ಚಳ ಹಾಗು ಘಾಟ್ ಭಾಗದ ಹರೇ ಬೆಟ್ಟ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ವಿಸ್ತಾರವಾಗಿ ಚರ್ಚಿಸಿ ಮಾಡ ಬೇಕಾದ ಸಿದ್ದತೆಗಳಿಗೆ ಸಚಿವರ ಮೂಲಕ ಚಾಲನೆ ನೀಡಲಾಯಿತು.
ಘಾಟ್ ಮದ್ಯ ಭಾಗದ ಹರೇ ಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಅರಂಭವಾದರೆ ಬೆಂಗಳೂರು ಮಂಗಳೂರು ಕುಂದಾಪುರ ಕಾರವಾರ ನಡುವೆ ಹೊಸ ರೈಲು ಹಾಗು ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ಪಟ್ಟಿ ರಚಿಸಲು ಸಾದ್ಯವಾಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.
ಕಾರವಾರ- ಕುಂದಾಪುರ - ಬೆಂಗಳೂರು ನಡುವೆ ಪಂಚಗಂಗಾ ಮಾದರಿಯಲ್ಲಿಯೆ, ಆದರೆ ತಡವಾಗಿ ಬೆಂಗಳೂರಿನಿಂದ ಹೊರಡುವ ಹೊಸ ಪಡೀಲ್ ಬೈಪಾಸ್ ನೇರ ರೈಲಿಗೆ ಸಚಿವರಿಗೆ ಮನವಿ ಮಾಡಲಾಗಿದ್ದು,ಇದರ ಜತೆ ಚಿಕ್ಕಮಗಳೂರು ತಿರುಪತಿ ಬೆಂಗಳೂರು ಮಾರ್ಗದ ಮೂಲಕ ಆರಂಭಿಸಲೂ ಮನವಿ ಮಾಡಲಾಯಿತು.
ಬೆಂಗಳೂರು ಮುರುಡೇಶ್ವರ ರೈಲಿನ ವಾಸ್ಕೋ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗು ವೇಲಾಂಕಣಿ , ತಿರುಪತಿ, ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಮತ್ತು ರೈಲು ಸಂಖ್ಯೆ 16585 SMVB ಮುಡೇಶ್ವರ ಎಕ್ಸ್ ಪ್ರೆಸ್ ಅನ್ನು ವಾಸ್ಕೋವರೆಗೆ ವಿಸ್ತರಿಸಲು ಹಾಗೂ ರೈಲು ಸಂಖ್ಯೆ 17317/18 ಎಸ್ ಪ್ರೆಸ್ ಅನ್ನು ಕಾರವಾರದವರೆಗೆ ವಿಸ್ತರಿಸಲು ಮತ್ತು ರೈಲು ಸಂಖ್ಯೆ 17317/18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಹಾಗೂ ಹುಬ್ಬಳ್ಳಿ ಅಂಕೋಲಾ , ಹಾಗೂ ತಾಳಗುಪ್ಪ ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ಚರ್ಚಿಸಲಾಯಿತು.