

ಸೊರಬ: ಭ್ರಷ್ಟಾಚಾರದಿಂದ ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಕುಂಠಿತವಾಗುತ್ತದೆ. ಹಾಗಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ಪಾರದರ್ಶಕವಾಗಿ ಸೇವೆ ಒದಗಿಸಬೇಕು ಎಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಪೊಲೀಸರಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ, ನಾಗರಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸಹಾಯ ಮಾಡಿದವರ ಮಾಹಿತಿ ಗೌಪ್ಯವಾಗಿರಿಸಿ ಅವರಿಗೆ ರಕ್ಷಣೆ ಸಹ ನೀಡಲಾಗುವುದು. ಇದರಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಸಾರ್ವಜನಿಕರು ಇತ್ತೀಚೆಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಕೇವಲ ಕಾಯ್ದೆ ಕಾನೂನಿನಡಿ ಪ್ರಕರಣ ದಾಖಲಿಸುವುದು ಮಾತ್ರ ಲೋಕಾಯುಕ್ತ ಪೊಲೀಸರ ಕೆಲಸವಲ್ಲ. ಭ್ರಷ್ಟಾಚಾರ ತಡೆಗೆ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. ಹಣ ಮತ್ತಿತರ ಬೇಡಿಕೆ ಇಡದೆ ಸರ್ಕಾರ ನೀಡುವ ಸಂಬಳಕ್ಕೆ ನಿಯತ್ತಿನಿಂದ ಸೇವೆ ಸಲ್ಲಿಸಬೇಕು. ಇದರಿಂದ ಅಧಿಕಾರಿಗಳ ಮೇಲೆ ಜನತೆಯಲ್ಲಿ ಗೌರವ ಹೆಚ್ಚುತ್ತದೆ ಎಂದು ತಿಳಿಸಿದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರನ್ನು ಸತಾಯಿಸದೆ ಸೇವೆಗಳನ್ನು ಒದಗಿಸಬೇಕು. ಗ್ರಾಮೀಣ ಭಾಗದ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಬಟ್ಟು ಕಚೇರಿಗಳಿಗೆ ಬರುತ್ತಾರೆ. ಅವರಿಗೆ ತ್ವರಿತವಾಗಿ ಸೌಲಭ್ಯ ಒದಗಿಸಬೇಕು ಎಂದರು.
ಸಾರ್ವಜನಿಕರಿಂದ ಐದು ಅಹವಾಲುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾದವು. ತಾಪಂ ಇಒ ಡಾ. ಎನ್.ಆರ್.ಪ್ರದೀಪ್‌ಕುಮಾರ್, ವಲಯ ಅರಣ್ಯಾಧಿಕಾರಿ ಜಾವೆದ್ ಬಾಷಾ ಅಂಗಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಬಿಇಒ ಪುಷ್ಪಾ, ಎಪಿಎಂಸಿ ಕಾರ್ಯದರ್ಶಿ ಆಶಾ ಇತರರಿದ್ದರು.