ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರ: ಬಿಜೆಪಿ ಗುಟುರು

IMG-20240704-WA0045
Published on

ಬೆಂಗಳೂರು: ರಾಜ್ಯದ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರ‌ವೆಂದು ಪ್ರತಿಪಕ್ಷ ಬಿಜೆಪಿ ಗುಟುರು ಹಾಕಿದೆ. ಈ ಸರ್ಕಾರ ತೊಲಗಿಸಲು ಕರೆ ನೀಡುವುದು ಸೇರಿ ಮೂರು ನಿರ್ಣಯಗಳನ್ನು ಗುರುವಾರ ಒಕ್ಕೊರಲಿನಿಂದ ಅಂಗೀಕರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹ್ಯಾಟ್ರಿಕ್ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ವಿಶೇಷ ಕಾರ್ಯಕಾರಿಣಿಯು ಅವರಿಗೆ ಅಭಿನಂದನೆ ಸಲ್ಲಿಸಿ ನಿರ್ಣಯ ಅಂಗೀಕರಿಸಿದೆ ಎಂದು ಸಂಸದ ಮತ್ತು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಬಿಜೆಪಿಯ ರಾಜ್ಯ ವಿಶೇಷ ಕಾರ್ಯಕಾರಿಣಿಯ ಸಮಾರೋಪ ಸಮಾರಂಭ ಮುಗಿದ ನಂತರ ವೈಟ್ ಪೆಟಲ್ಸ್ ನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ ಒಕ್ಕೂಟವು ಭಾರತದ ಸಂವಿಧಾನ ಮತ್ತು ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜಗತ್ತಿನಾದ್ಯಂತ ಅಪಪ್ರಚಾರ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಈ ಚುನಾವಣೆ ಮಹತ್ವ ಪಡೆದಿತ್ತು ಎಂದು ವಿವರಿಸಿದರು. ಬಿಜೆಪಿ ಸರಕಾರದ ಸಾಧನೆಗಳ ಕಾರಣ ಈ ಗೆಲುವು ಲಭಿಸಿದ್ದನ್ನೂ ಅವರು ಉಲ್ಲೇಖಿಸಿದರು. ನಾನು (ವಿಶ್ವೇಶ್ವರ ಹೆಗಡೆ ಕಾಗೇರಿ) ಈ ನಿರ್ಣಯ ಮಂಡಿಸಿದ್ದು, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ದೊಡ್ಡನಗೌಡರು ಅನುಮೋದಿಸಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರ ತೊಲಗಿಸಲು ಕರೆ

ಅಭಿವೃದ್ಧಿಶೂನ್ಯ, ಹಗರಣಗಳ ಕಾಂಗ್ರೆಸ್ ಸರಕಾರವನ್ನು ತೊಲಗಿಸಲು ಕರೆ ಕೊಡುವ ಎರಡನೇ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ವಿಪಕ್ಷ ನಾಯಕ ಅಶೋಕ್ ಅವರು ಇದನ್ನು ಮಂಡಿಸಿದರೆ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಂಗಾರು ಹನುಮಂತು ಅವರು ಅನುಮೋದಿಸಿದ್ದಾರೆ.

ಆರ್ಥಿಕ ಶಿಸ್ತು ಮರೆತಿರುವುದು, ಆರ್ಥಿಕ ದಿವಾಳಿತನದ ಕಡೆ ರಾಜ್ಯವನ್ನು ಒಯ್ಯುತ್ತಿರುವುದು, ಅಭಿವೃದ್ಧಿ ಕಾರ್ಯಗಳಿಗೆÉ ಹಣ ಕೊಡದೆ ಇರುವುದು, ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಭದ್ರ ಪಡಿಸುವ ಕಡೆ ಗಮನ ಕೊಟ್ಟು ರಾಜ್ಯದ ಹಿತ ಮರೆತ ಕುರಿತು ಇದರಲ್ಲಿ ವಿವರಿಸಲಾಗಿದೆ ಎಂದರು.

ಕಾನೂನು- ಸುವ್ಯವಸ್ಥೆ ಹದಗೆಟ್ಟು ಜನರು ಆತಂಕದಿಂದ ಇರುವ ಸ್ಥಿತಿ ನಿರ್ಮಾಣವಾದ ಕುರಿತು ಖಂಡಿಸಿದ್ದೇವೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಈ ನಿರ್ಣಯ ಆಗ್ರಹಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ಛಲವಾದಿ ನಾರಾಯಣಸ್ವಾಮಿ, ವಕ್ತಾರರಾದ ಅಶೋಕ್ ಗೌಡ, ಸುರಭಿ, ಎಚ್.ಎನ್ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net