ನಿಗಮದ ಹಗರಣ, ಸಂಘಟಿತ ಅಪರಾಧ: ಎನ್.ರವಿಕುಮಾರ್ ಆರೋಪ

n-ravikumar
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಸಂಘಟಿತ ಅಪರಾಧ. ಇದೊಂದು ಅಂತರಾಜ್ಯ ಮಟ್ಟದ ಅಪರಾಧ ಹಗರಣವಾಗಿದೆ. ತೆಲಂಗಾಣಕ್ಕೆ ಹಣ ಕಳುಹಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇ ಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ  ಎನ್.ರವಿಕುಮಾರ್ ಅವರು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣ ಎಂದರಲ್ಲದೆ, ಇನ್ನೂ ಬೇರೆ ಬೇರೆ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಗರಣ ನಡೆದ ವಾಸನೆ ಹರಡಿದೆ. ಇವುಗಳ ಸಾಕ್ಷ್ಯಾಧಾರ ಸಂಗ್ರಹದ ಪ್ರಯತ್ನ ನಡೆದಿದೆ ಎಂದು ಎಚ್ಚರಿಸಿದರು.

ಅತ್ಯಂತ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಪತ್ರದಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣದ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದ್ದರು ಎಂದರು.

ಇದೀಗ ಲೆಕ್ಕಾಧಿಕಾರಿ ಪರಶುರಾಮ್ ಅವರು 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಭ್ರಷ್ಟರ ರಕ್ಷಣೆಯ ಖಾತೆಯನ್ನು ಮುಖ್ಯಮಂತ್ರಿಗಳು ಹೊಸದಾಗಿ ಸೇರಿಸಿಕೊಂಡಿದ್ದಾರಾ?. ಸಿದ್ದರಾಮಯ್ಯನವರು ಭ್ರಷ್ಟರ ರಕ್ಷಣಾ ಖಾತೆ ಮುಖ್ಯಮಂತ್ರಿ ಎಂದು ಆರೋಪಿಸಿದರು.

ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ನಡೆಸಿದ ಸಭೆಯ ಫೂಟೇಜ್ ಅನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಪರಶುರಾಮ್ ಅವರು ಈ ಫೂಟೇಜ್, ಸಾಕ್ಷ್ಯಾಧಾರವನ್ನು ರಕ್ಷಿಸಲು ಅಫಿಡವಿಟ್ ಸಲ್ಲಿಸಿದ್ದಾರೆ ಎಂದರು.

ರಾಹುಲ್ ಗಾಂಧಿಯವರ ಉತ್ತರವೇನು?

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶೇ 40 ಕಮಿಷನ್ ಇತ್ತು ಎಂದು ಆರೋಪಿಸಿದ ಸಂಬಂಧ ಬಿಜೆಪಿ ದೂರಿನಡಿ ಕೋರ್ಟ್ ವಿಚಾರಣೆಗೆ ನಿನ್ನೆ ರಾಹುಲ್ ಗಾಂಧಿಯವರು ಹಾಜರಾಗಿದ್ದರು. ಈಗ ಅವರು ಜಾಮೀನು ತೆಗೆದುಕೊಂಡಿದ್ದಾರೆ. ಶೇ 40 ಕಮಿಷನ್ ಅನ್ನು ಅವರು ಸಾಬೀತು ಪಡಿಸಬೇಕಿದೆ. ಕಾಂಗ್ರೆಸ್ಸಿನವರದು ಸತ್ಯ ಹರಿಶ್ಚಂದ್ರರ ಸರ್ಕಾರ ಎನ್ನುತ್ತಿದ್ದರು. 187 ಕೋಟಿ ರೂ ಭ್ರಷ್ಟಾಚಾರ ಆದ ಬಗ್ಗೆ ರಾಹುಲ್ ಗಾಂಧಿಯವರ ಉತ್ತರವೇನು ? ಎಂದು ರವಿಕುಮಾರ್ ಕೇಳಿದರು.

ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಬ್ಬರು ಸಾಕ್ಷ್ಯಾಧಾರ ಕುರಿತು ಆತಂಕ ಸೂಚಿಸಿದ್ದಾರೆ. ಈ ರಾಜ್ಯದಲ್ಲಿ ಅಧಿಕಾರಿಗಳ ಸಾವಿಗೆ ಏನೇನೂ ಬೆಲೆ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿಗಳಿಗೆ ಕನಿಷ್ಠ ನೈತಿಕತೆಯೂ ಇಲ್ಲ. ಚಂದ್ರಶೇಖರ್ ಅವರ ಆತ್ಮಹತ್ಯೆಯ 12 ದಿನಗಳ ನಂತರ ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದಾರೆ. ಉಳಿದವರ ರಾಜೀನಾಮೆ ಯಾವಾಗ ? ಎಂದು ಎನ್.ರವಿಕುಮಾರ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net