ಪ್ರಧಾನಿ ಮೋದಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ಉದ್ಯಮಿಗಳೂ ಸೇರಿದಂತೆ 400 ಅತಿಥಿಗಳು ಭಾಗಿ

pm modi and biden
Published on

ವಾಷಿಂಗ್ಟನ್​: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯರಿಗಾಗಿ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ವಿಶೇಷ ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನ ಮಂತ್ರಿಯವರಿಗಾಗಿ ಅದ್ಭುತವಾದ ಸಸ್ಯಾಹಾರಿ ಮೆನುವನ್ನು ವಿಶೇಷವಾಗಿ ರಚಿಸಲಾಗಿದೆ.

ಪ್ರಧಾನಿ ಮೋದಿಯವರು ಸಸ್ಯಾಹಾರಿಯಾಗಿದ್ದು, ಕಳೆದ ಸಲ ಸಿರಿಧಾನ್ಯದ ಮಹತ್ವದ ಬಗ್ಗೆ ಹೇಳಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಪ್ರಸಿದ್ಧ ಶೆಫ್ ನೀನಾ ಕರ್ಟಿಸ್ ಎಂಬುವರು ಶ್ವೇತಭವನದ ಬಾಣಸಿಗರ ಜತೆ ಸೇರಿಕೊಂಡು ಉತ್ತಮವಾದ ಆಹಾರಗಳನ್ನು ತಯಾರಿಸಿದ್ದಾರೆ. ಈ ಭೋಜನಕೂಟವು ರಾಗಿ, ಮೆಕ್ಕೆಜೋಳದ ಸಲಾಡ್, ಕಲ್ಲಂಗಡಿ, ಅಣಬೆಗಳು, ಕೇಸರಿಯುಕ್ತ ಕೆನೆ, ಮೊಸರು, ಹಾಗೂ ರಾಗಿ ಕೇಕ್​ಗಳನ್ನು ಒಳಗೊಂಡಿದೆ.

ಶ್ವೇತಭವನದ ಈ ಭೋಜನಕ್ಕೆ 400ಕ್ಕೂ ಹೆಚ್ಚು ಅತಿಥಿಗಳಿಗೆ ವೈಟ್​​ಹೌಸ್ ಆಹ್ವಾನವನ್ನು ನೀಡಿದ್ದು, ಬಿಡನ್ ಆಯೋಜಿಸಿದ್ದ ರಾಜ್ಯ ಔತಣಕೂಟದಲ್ಲಿ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ ಮತ್ತು ಭಾರತ ಮೂಲದ ಗೂಗಲ್​ ಸಿಇಒ ಸುಂದರ್ ಪಿಚಾಯಿ ಭಾಗವಹಿಸಿದ್ದಾರೆ.

ಜತೆಗೆ ಆಪಲ್ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪೆಪ್ಸಿ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಸೇರಿದಂತೆ ಇನ್ನು ಅನೇಕರು ಪಾಲ್ಗೊಂಡಿದ್ದರು.

ಔತಣಕೂಟದಲ್ಲಿ ಬಿಡೆನ್ ಕುಟುಂಬದ ಸದಸ್ಯರು ಹಂಟರ್ ಬಿಡೆನ್, ಆಶ್ಲೇ ಬಿಡೆನ್, ಜೇಮ್ಸ್ ಬಿಡೆನ್ ಮತ್ತು ನವೋಮಿ ಬಿಡೆನ್ ನೀಲ್ ಜತೆಗೆ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಉಪಸ್ಥಿತರಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net