ಜುಲೈನಲ್ಲಿ ಕರೊನಾ ಕಂಟಕ: ಡಬ್ಲ್ಯುಎಚ್​ಒ, ಸಚಿವ ಡಾ ಸುಧಾಕರ್ ಸುಳಿವು

Corona Virus 8 June 20
Published on

ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕರೊನಾ ವೈರಸ್ ಪ್ರಕರಣ ತಕ್ಕಮಟ್ಟಿಗೆ ನಿಯಂತ್ರಣದಲ್ಲಿ ಇರುವ ನಡುವೆಯೇ, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಜುಲೈನಲ್ಲಿ ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚಳವಾಗುವ ಬಗ್ಗೆ ತಜ್ಞರು ವರದಿ ನೀಡಿದ್ದಾರೆ ಎಂದು ಅವರು ಚಿಕ್ಕಬಳ್ಳಾಪುರದಲ್ಲಿ ತಿಳಿಸಿದ್ದಾರೆ. ಕರೊನಾ ಸವಾಲು ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಒಂದು ಲಕ್ಷ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, 70 ಹೊಸ ಲ್ಯಾಬ್​ಗಳನ್ನು ಸ್ಥಾಪನೆ ಮಾಡಲಾಗಿದೆ. ಕ್ಷಿಪ್ರ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ಸೇರಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದೆಹಲಿ, ಮುಂಬೈ, ಚೆನ್ನೈ ಸೇರಿ ದೇಶದ ಹಲವು ಮಹಾನಗರಗಳಲ್ಲಿ ಪ್ರತಿದಿನ ಸಾವಿರಾರು ಹೊಸ ಪ್ರಕರಣ ಬೆಳಕಿಗೆ ಬರುತ್ತಿವೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಲ್ಲಿ ಸ್ಥಿತಿ ಇನ್ನೂ ನಿಯಂತ್ರಣದಲ್ಲಿದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಕರೊನಾ ವ್ಯಾಪಕವಾಗುವ ಅಪಾಯವಿದೆ.

ಚಾಮರಾಜ ನಗರದಲ್ಲಿ ಮೊದಲ ಪ್ರಕರಣ

ಈವರೆಗೆ ಒಂದೂ ಕರೊನಾ ಪ್ರಕರಣ ಇಲ್ಲದೆ ಗ್ರೀನ್ ಜೋನ್​ನಲ್ಲಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ಒಂದು ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನಿಂದ ಬಂದಿದ್ದ ಓರ್ವ ವ್ಯಕ್ತಿಗೆ ವೈರಸ್ ದೃಢಪಟ್ಟಿದೆ.

ಡಬ್ಲ್ಯುಎಚ್​ಒ ಎಚ್ಚರಿಕೆ

ಕರೊನಾದಿಂದ ಜಾಗತಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ಎಚ್ಚರಿಸಿದೆ. ಅಮೆರಿಕದಲ್ಲಿ ಹೊಸ ಪ್ರಕರಣಗಳು ಮತ್ತೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿವೆ. ಯುರೋಪಿನಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಜಾಗತಿಕವಾಗಿ ಪರಿಸ್ಥಿತಿ ಹದಗೆಡುತ್ತಿದೆ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net