

ನವದೆಹಲಿ: ಕೋವಿಡ್19 ಕಾಯಿಲೆಗೆ ಲಸಿಕೆ ಕಂಡು ಹಿಡಿಯುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಜಗತ್ತಿನಾದ್ಯಂತ 120ಕ್ಕೂ ಅಧಿಕ ಕಂಪನಿಗಳು ಸಂಶೋಧನೆಯಲ್ಲಿ ತೊಡಗಿವೆ. ಈ ಪೈಕಿ 10 ಲಸಿಕೆಗಳು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ.
ಸದ್ಯ ಅಮೆರಿಕದ ಮಾಡೆರ್ನಾ ಕಂಪನಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಅಮೆರಿಕ ಸರ್ಕಾರ ಐದು ಕಂಪನಿಗಳ ಮೇಲೆ ಭಾರಿ ಭರವಸೆ ಇಟ್ಟಿದೆ. ಆ ಪೈಕಿ ಮಾಡೆರ್ನಾ ಕೂಡ ಒಂದಾಗಿದೆ.
ಈ ನಡುವೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ತಂಡ ಅಸ್ಟ್ರಾ ಜೆನೆಕಾ ಕಂಪನಿಯೊಂದಿಗೆ ಸೇರಿ ತಯಾರಿಸುತ್ತಿರುವ ಕರೊನಾ ಲಸಿಕೆಯನ್ನು ತನ್ನ ದೇಶದ ರೋಗಿಗಳ ಮೇಲೆ ಪ್ರಯೋಗಿಸಲು ಬ್ರೆಜಿಲ್ ಅನುಮತಿ ನೀಡಿದೆ.
ಇನ್ನು, ಭಾರತದ ವಿಚಾರದಲ್ಲಿ ಹೇಳುವುದಾದರೆ, ಇಲ್ಲಿನ 14 ಕಂಪನಿಗಳು ಕರೊನಾ ಲಸಿಕೆ ಕಂಡು ಹಿಡಿಯುವಲ್ಲಿ ತೊಡಗಿವೆ. ಈ ಪೈಕಿ 4 ಕಂಪನಿಗಳ ಲಸಿಕೆಗಳು ಇನ್ನು ಮೂರರಿಂದ ಐದು ತಿಂಗಳ ಅವಧಿಯಲ್ಲಿ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಲಸಿಕೆ ಸಂಶೋಧನೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾಡೆರ್ನಾ ಕಂಪನಿ ಮಾನವರ ಮೇಲಿನ ಪ್ರಯೋಗದಲ್ಲಿ ಆರಂಭಿಕ ಯಶಸ್ಸು ಸಾಧಿಸಿದೆ. ಕಳೆದ ವಾರವಷ್ಟೇ ಎರಡನೇ ಹಂತದ ಅಥವಾ ಮಧ್ಯಮ ಹಂತದ ಪರೀಕ್ಷೆಯನ್ನು ಆರಂಭಿಸಿದೆ. ಜುಲೈ ಆರಂಭದಲ್ಲಿ ಅಂತಿಮ ಹಂತದ ಪರೀಕ್ಷೆಯನ್ನು ಕೈಗೆತ್ತಿಕೊಳ್ಳಲಿದೆ. ಇದರಲ್ಲಿ 30,000 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುತ್ತದೆ. ಹೆಚ್ಚಿನವರು 18-55 ವರ್ಷದವರಾಗಿದ್ದಾರೆ. ಇವರಲ್ಲಿ ಕರೊನಾದಿಂದ ಗಂಭೀರ ಅನಾರೋಗ್ಯಕ್ಕೆ ಒಳಗಾದವರೂ ಸೇರಿದ್ದಾರೆ.
ಇದರ ಫಲಿತಾಂಶ ಗೊತ್ತಾಗುತ್ತಿದ್ದಂತೆ ಲಸಿಕೆ ಉತ್ಪಾದನೆ ಕಾರ್ಯಕ್ಕೆ ಚಾಲನೆ ಸಿಗಲಿದೆ. ಅಂದರೆ, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಸೆಪ್ಟಂಬರ್ ವೇಳೆಗೆ ಕರೊನಾ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.