

ಮಡಗಾಸ್ಕರ್ (ಪೂರ್ವ ಆಫ್ರಿಕಾ): ಕರೊನಾ ವೈರಸ್ ಹರಡುವಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇದು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಇಲ್ಲದೆ ಮನೆಯಿಂದ ಹೊರಕ್ಕೆ ಕಾಲಿಡುವುದು ಅಪರಾಧವೇ ಸರಿ.
ಲಾಕ್ಡೌನ್ ಉಲ್ಲಂಘಿಸಿಯೋ ಅಥವಾ ಮಾಸ್ಕ್ ಧರಿಸದೇ ಹೊರಗೆ ಬಂದವರಿಗೆ ಬಸ್ಕಿ ಹೊಡೆಸಿರುವ ಘಟನೆ ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಆಗಿವೆ, ಅಗುತ್ತಲೇ ಇವೆ. ಪೊಲೀಸರ ಏಟಿಗೂ ಮಣಿಯದೇ, ಬಸ್ಕಿಯೂ ಜಗ್ಗದೇ ಕೆಲ ಪುಂಡರು ಊರೂರು ಸುತ್ತುವುದು ನಡೆದೇ ಇದಿ ಎನ್ನಿ. ಆದರೂ ಮರ್ಯಾದೆಗೆ ಅಂಜುವವರು ಒಮ್ಮೆ ಇಂಥ ಶಿಕ್ಷೆಗೆ ಒಳಗಾದರೆ ಮತ್ತೆ ಹೊರಗಡೆ ಕಾಲಿಡುವ ಧೈರ್ಯ ಮಾಡುತ್ತಿಲ್ಲ.
ಇದು ಭಾರತದ ಮಾತಾದರೆ, ಶಿಕ್ಷೆ ಇಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲಿಯೂ ನಡೆಯುತ್ತಲೇ ಇದೆ. ಶಿಕ್ಷೆಯ ಪ್ರಮಾಣ, ವಿಧಾನ ಮಾತ್ರ ಬೇರೆ ಬೇರೆ ಅಷ್ಟೇ. ಇಲ್ಲೊಂದು ಕಡೆ, ಮಾಸ್ಕ್ ಧರಿಸದೇ ಮನೆಯಿಂದ ಹೊರಕ್ಕೆ ಕಾಲಿಡುವವರಿಗೆಲ್ಲರಿಗೂ ಕಸದ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಗುಡಿಸುವ ಕೆಲಸಕ್ಕೆ ತೊಡಗಿಸಲಾಗುತ್ತಿದೆ. ಅದೂ ಒಂದಿಷ್ಟು ಜಾಗವಲ್ಲ. ಪೊಲೀಸರು ಹೇಳಿದಂತೆ ಎಷ್ಟು ರಸ್ತೆಯನ್ನಾದರೂ ಗುಡಿಸಬೇಕಾಗುತ್ತದೆ. ಇಲ್ಲದಿದ್ದರೆ ಪೊಲೀಸರಿಂದ 'ಬಿಸಿ ಬಿಸಿ ಕಜ್ಜಾಯ' ತಿನ್ನಬೇಕಾಗುತ್ತದೆ.
ಅಷ್ಟೇ ಅಲ್ಲ… ಶಿಕ್ಷೆ ಅನುಭವಿಸುವ ವ್ಯಕ್ತಿಯ ಫೋಟೋ ಹಾಗೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇಷ್ಟು ಸಾಕಲ್ಲವೆ ಮರ್ಯಾದೆ ಹೋಗಲು. ಆದ್ದರಿಂದ ಮಾಸ್ಕ್ ಹಾಕದೇ ಹೊರಬರಲು ಇಲ್ಲಿ ಜನರು ಹೆದರುತ್ತಿದ್ದಾರೆ.
ಅಷ್ಟಕ್ಕೂ ಇಂಥದ್ದೊಂದು ಶಿಕ್ಷೆ ಇರುವುದು ದೂರದ ಪೂರ್ವ ಆಫ್ರಿಕಾದಲ್ಲಿ. ಅಲ್ಲಿರುವ ಮಡಗಾಸ್ಕರ್ ಎಂಬ ಪ್ರದೇಶದಲ್ಲಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.
ಕರೊನಾವೈರಸ್ ಹರಡುವುದನ್ನು ತಡೆಯಲು ಅಧ್ಯಕ್ಷ ಆಂಡ್ರಿ ರಾಜೋಲಿನಾ ಅವರು ರಾಜಧಾನಿ ಅಂಟಾನನರಿವೊದಲ್ಲಿ ಹಾಗೂ ಫಿಯಾನರಾಂಟ್ಸೊವಾ ಮತ್ತು ಟೊಮಾಸಿನಾ ನಗರಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ.
ಈ ಹೊಸ ಶಿಕ್ಷೆಯ ಬಗ್ಗೆ ಎರಡು ದಿನಗಳ ಹಿಂದಷ್ಟೇ ಘೋಷಣೆ ಮಾಡಲಾಗಿದೆ. ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಎಷ್ಟೆಂದರೂ ಜನರಲ್ಲವೆ? ಹೇಗೆ ಕೇಳಿಯಾರು? ಮಾಸ್ಕ್ ಧರಿಸಿ ಹೊರಕ್ಕೆ ಬಂದಿದ್ದಾರೆ. ಅಂಟಾನನರಿವೊ ಮತ್ತು ಫಿಯಾನರಾಂಟ್ಸೋವಾದಲ್ಲಿ ಸುಮಾರು 500 ಜನರಿಗೆ ಸೋಮವಾರ ಗುಡಿಸುವ ಶಿಕ್ಷೆ ವಿಧಿಸಲಾಗಿದೆ. 500 ಮಂದಿ ಗುಡಿಸಿದರೆ ರಸ್ತೆ ಎಷ್ಟು ಶುಚಿಯಾಗಿರಬೇಕು ಅಲ್ಲವೆ?
ಶಿಕ್ಷೆಯೂ ಆಯಿತು, ನಗರದ ಸ್ವಚ್ಛತೆಯೂ ಆಯಿತು. ಕೊಟ್ಟರೆ ಇಂಥ ಶಿಕ್ಷೆ ಕೊಡಬೇಕು ಎನ್ನುತ್ತಿದ್ದಾರೆ ಹಲವಾರು ಮಂದಿ. (ಏಜೆನ್ಸೀಸ್)