

ನವದೆಹಲಿ: ಮಾರಕ ಕೊರೊನಾ ವೈರಸ್ ಚೀನಾವನ್ನು ಅಕ್ಷರಶಃ ನಡುಗಿಸಿದೆ. ಈಗಾಗಲೇ 304 ಮಂದಿಯನ್ನು ಬಲಿ ಪಡೆದಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಬೇರೆಡೆಗೂ ಹರಡುತ್ತಿದ್ದು ಕೆಲ ರಾಷ್ಟ್ರಗಳಲ್ಲಿಯೂ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಚೀನಾ ಪ್ರವಾಸ ನಿರ್ಬಂಧದ ಜತೆಗೆ ಅಲ್ಲಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುತ್ತಿವೆ.
ಈ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿದೆ. ತನ್ನ ಪ್ರಜೆಗಳನ್ನು ಕ್ಷೇಮವಾಗಿ ಸ್ವದೇಶಕ್ಕೆ ಕರೆತರುತ್ತಿದ್ದು, ಇದನ್ನು ನೋಡಿದ ಚೀನಾದಲ್ಲಿನ ಪಾಕಿಸ್ತಾನ ಪ್ರಜೆಗಳು ತಮ್ಮ ದೇಶದ ಮೇಲೆ ಆಕ್ರೋಶ ಹೊರ ಹಾಕಿ ರಕ್ಷಿಸುವಂತೆ ಕಣ್ಣೀರಿಡುತ್ತಿದ್ದಾರೆ.
ವೈರಸ್ ಹೆಚ್ಚಾಗಿ ಹರಡಿರುವ ಚೀನಾದ ವುಹಾನ್ ನಗರದಿಂದ ಶನಿವಾರ ಭಾರತವು 324 ಮಂದಿಯನ್ನು ಸ್ವದೇಶಕ್ಕೆ ಕರೆತಂದಿದೆ. ಅಲ್ಲದೆ, ಇಂದು ಬೆಳಗ್ಗೆ ಮತ್ತಷ್ಟು ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಸಾಕಷ್ಟು ನಿಗಾವಹಿಸಿ ಎಲ್ಲರನ್ನು ತಪಾಸಣೆಗೆ ಒಳಪಡಿಸಿ ವೈರಸ್ ಹರಡದಂತೆ ಕ್ರಮ ತೆಗೆದುಕೊಂಡು ಸುರಕ್ಷಿತವಾಗಿ ತನ್ನ ಪ್ರಜೆಗಳನ್ನು ಭಾರತ ಕರೆತಂದಿದೆ.
ಇನ್ನೊಂದೆಡೆ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರವು ಸಂಕಷ್ಟದ ಸಮಯದಲ್ಲಿ ಮಿತ್ರ ರಾಷ್ಟ್ರ ಚೀನಾದೊಂದಿಗಿನ ಐಕ್ಯತೆ ಪ್ರದರ್ಶಿಸುವ ಹೆಸರಲ್ಲಿ ವುಹಾನ್ ನಗರದಿಂದ ತನ್ನ ಪ್ರಜೆಗಳನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಹೇಳಿದೆ.
ಇತ್ತ ವುಹಾನ್ನಲ್ಲಿ ನೆಲೆಸಿರುವ ಪಾಕ್ ಪ್ರಜೆಗಳು ಭಾರತ ಸರ್ಕಾರದ ಕಾರ್ಯಾಚರಣೆ ಕಂಡು ತಮ್ಮ ಪಾಕ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹರಿಬಿಡುವ ಮೂಲಕ ಕಿಡಿಕಾರಿದ್ದಾರೆ. ಅಲ್ಲದೆ, ನೆರವಿಗಾಗಿ ಕಣ್ಣೀರಿಟ್ಟಿದ್ದಾರೆ.
ವೈರಲ್ ಆಗಿರೋ ವಿಡಿಯೋವೊಂದರಲ್ಲಿ ಪಾಕಿಸ್ತಾನಿ ವಿದ್ಯಾರ್ಥಿನಿಯೊಬ್ಬಳು ಭಾರತ ತನ್ನ ಪ್ರಜೆಗಳನ್ನು ವುಹಾನ್ನಿಂದ ಬಸ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವುದನ್ನು ಚಿತ್ರೀಕರಿಸಿ ಹರಿಬಿಟ್ಟಿದ್ದಾಳೆ. ಈ ಬಗ್ಗೆ ಬರೆದುಕೊಂಡಿರುವ ಆಕೆ ಭಾರತ ಸರ್ಕಾರ ತನ್ನ ಪ್ರಜೆಗಳನ್ನು ಹೇಗೆ ರಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಆದರೆ, ಪಾಕಿಸ್ತಾನ ಸರ್ಕಾರ ತನ್ನ ಪ್ರಜೆಗಳು ಸಾಯಲು ಸ್ಥಳಾಂತರಿಸದೇ ಇಲ್ಲಿಯೇ ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾಳೆ.
ಬಾಂಗ್ಲಾದೇಶವು ಕೂಡ ತನ್ನ ಪ್ರಜೆಗಳನ್ನು ಸ್ಥಳಾಂತರಿಸಿದೆ. ಆದರೆ, ಇಲ್ಲಿರುವ ನಮ್ಮನ್ನು ನಮ್ಮ ಸರ್ಕಾರ ಸ್ಥಳಾಂತರ ಮಾಡುವುದಿಲ್ಲ ಎಂದು ಹೇಳಿದೆ. ಭಾರತವನ್ನು ನೋಡಿಯಾದರೂ ಕಲಿಯಿರಿ ಎಂದು ವುಹಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪಾಕ್ ವಿದ್ಯಾರ್ಥಿನಿ ಆಕ್ರೋಶ ಹೊರಹಾಕಿದ್ದಾಳೆ. ಹೀಗೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಆದರೂ ಪಾಕ್ ಸರ್ಕಾರ ಐಕ್ಯತೆ ಜಪ ಮಾಡುತ್ತಿದೆ.
ವುಹಾನ್ನಲ್ಲಿರುವ ಅನೇಕ ವಿಶ್ವವಿದ್ಯಾಲಯದಲ್ಲಿ ಸುಮಾರು 800 ಪಾಕಿಸ್ತಾನಿ ವಿದ್ಯಾರ್ಥಿಗಳಿದ್ದಾರೆ. ಸುಮಾರು 11 ಮಿಲಿಯನ್ ಜನರನ್ನು ವುಹಾನ್ನಿಂದ ಚೀನಾ ಅಧಿಕಾರಿಗಳು ಯಾವುದೇ ಸಂಪರ್ಕ ಇರದಂತೆ ಬೇರ್ಪಡಿಸಿದ್ದಾರೆ. ಇತ್ತ ಸ್ಥಳಾಂತರ ಮಾಡುವುದಿಲ್ಲ ಎಂದು ಪಾಕ್ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪಾಕ್ ಆರೋಗ್ಯ ಸಚಿವ ಡಾ. ಜಫರ್ ಮಿರ್ಜಾ, ನಮ್ಮ ಪ್ರೀತಿಪಾತ್ರರಲ್ಲಿ ಒಬ್ಬರಾದ ಚೀನಾದ ಹಿತಾಶಕ್ತಿಯಿಂದ ನೀವು ಅಲ್ಲಿಯೇ ಉಳಿಯ ಬೇಕಾಗಿದೆ. ವಿಶ್ವದಲ್ಲೇ ಇದೊಂದು ಅತಿ ದೊಡ್ಡ ಹಿತಾಶಕ್ತಿಯಾಗಿರುವುದರಿಂದ ನಾವು ನಮ್ಮವರನ್ನು ಸ್ಥಳಾಂತರಿಸುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)