

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕಿತರ ಸಂಖ್ಯೆ 3,374ಕ್ಕೆ ಏರಿಕೆಯಾಗಿದೆ. ಈ ಸೋಂಕಿಗೆ ಒಟ್ಟು 77 ಮಂದಿ ಮೃತಪಟ್ಟಿದ್ದಾರೆ. ಕಳೆದ 12 ಗಂಟೆಗಳಲ್ಲಿ 302 ಮಂದಿಗೆ ಸೋಂಕು ಪೀಡಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈವರೆಗೆ ಗುಣಮುಖರಾಗಿರುವ ಸಂಖ್ಯೆ 267. ಮಹಾರಾಷ್ಟ್ರದಲ್ಲಿ 24 ಮಂದಿ ಸೋಂಕಿನಿಂದ ಈವರೆಗೆ ಮೃತಪಟ್ಟಿದ್ದರೆ, ಗುಜರಾತ್‌ನಲ್ಲಿ 10, ತೆಲಂಗಾಣದಲ್ಲಿ 7, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ತಲಾ 6, ಪಂಜಾಬ್‌ನಲ್ಲಿ 5, ಕರ್ನಾಟಕದಲ್ಲಿ 4, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ತಲಾ ಮೂರು, ಉತ್ತರ ಪ್ರದೇಶ, ಕೇರಳ, ಜಮ್ಮು ಕಾಶ್ಮೀರದಲ್ಲಿ ತಲಾ ಇಬ್ಬರು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಬಿಹಾರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಈ ಮಧ್ಯೆ, ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 17 ರಾಜ್ಯಗಳಲ್ಲಿ ಸೋಂಕು ದೃಢಪಟ್ಟಿದೆ.
ತಮಿಳುನಾಡು, ದೆಹಲಿ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಈ ಸಂಖ್ಯೆ ಹೆಚ್ಚಾಗಿದೆ. ಈ ಸಭೆಯಲ್ಲಿ ಭಾಗವಹಿಸಿರುವ ಮಂದಿಯ ಪೈಕಿ ಶೇ.30ರಷ್ಟು ಜನರು ‘ನಾವು ಅರ್ಥಮಾಡಿಕೊಳ್ಳಲು ಹಾಗೂ ನಿರ್ವಹಿಸಲು ಸಾಧ್ಯವಾಗದ ಒಂದು ನಿರ್ದಿಷ್ಟ ಸ್ಥಳದಿಂದ ಬಂದವರು’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ಹೇಳಿದ್ದಾರೆ.