

ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಬಿಡುವೆನೆಂದು ತಿರುಪತಿಯಿಂದ ಶುಕ್ರವಾರ ಲಾರಿ ಹತ್ತಿಸಿಕೊಂಡ ಚಾಲಕ ಮಾರ್ಗಮಧ್ಯೆ ಹಣ ಸುಲಿಗೆ ಮಾಡಿ, ಬಿಟ್ಟು ಹೋಗಿದ್ದು, ವೃದ್ಧೆ ಮತ್ತು ಆಕೆಯ ಪುತ್ರಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ಎಸ್. ಸರ್ಗುಣಬಾಯಿ ಎಂಬುವವರು ಮಗಳೊಂದಿಗೆ ಮಾರ್ಚ್‌ನಲ್ಲಿ ಆಂಧ್ರದ ತಿರುಮಲ ತಿರುಪತಿ ದೇವಾಲಯದ ಶ್ರೀವಾರಿ ಸೇವಾ ಕಾರ್ಯಕ್ರಮಕ್ಕೆ ಹೋಗಿದ್ದರು. ಇದರ ನಡುವೆ ಕರೊನಾ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಯಿತು. ಅಧಿಕಾರಿಗಳು ಇವರಿಬ್ಬರನ್ನು ಕರ್ನಾಟಕಕ್ಕೆ ಬರಲು ಬಿಡಲಿಲ್ಲ್ಲ. ಇದರಿಂದ ತಿರುಪತಿಯಲ್ಲಿಯೇ ಹಲವು ದಿನ ಕಾಲ ಕಳೆದ ಅಜ್ಜಿ ಮತ್ತು ಮಗಳು ಹಣಕಾಸಿನ ಸಮಸ್ಯೆ ಎದುರಾಗುವ ಆತಂಕದಲ್ಲಿ ಸಿಕ್ಕ ವಾಹನದಲ್ಲಿ ಊರಿಗೆ ಹೋಗಲು ಯತ್ನಿಸಿದ್ದಾರೆ.
ಇದೇ ವೇಳೆ ಬಂದ ಲಾರಿ ಚಾಲಕ ಹಣ ಕೊಟ್ಟರೆ ಬಿಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ಆದರೆ ಮಾರ್ಗಮಧ್ಯೆ ಬೆದರಿಸಿ ಹಣ ಕಸಿದುಕೊಂಡು ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆಯಲ್ಲಿ ಇಳಿಸಿ ಹೋಗಿದ್ದಾನೆ.
ಕತ್ತಲಿನಲ್ಲಿ ಯಾರೂ ಇಲ್ಲದಿರುವುದರಿಂದ ಅಸಹಾಯಕತೆಯಿಂದ ಆತಂಕದಲ್ಲಿ ಇವರು ಕಿರುಚಾಡಿದ್ದನ್ನು ಕೇಳಿಸಿಕೊಂಡ ಸ್ಥಳೀಯ ರೈತರು ಜಿಲ್ಲಾಸ್ಪತ್ರೆಗೆ ಕರೆತಂದು ಬಿಟ್ಟಿದ್ದು, ಸದ್ಯ ಇಲ್ಲಿಯೇ ಆಶ್ರಯ ಪಡೆದಿದ್ದಾರೆ.