

ಮಂಗಳೂರು: ತುರ್ತು ಸ್ಥಿತಿಯಲ್ಲಿ ಕೊವಿಡ್ -19 ಹೊರತಾಗಿ ಇತರ ರೋಗಿಗಳನ್ನು ಕೇರಳದಿಂದ ರಾಜ್ಯಕ್ಕೆ ಕರೆದು ತರಬಹುದು ಎನ್ನುವ ಉಭಯ ರಾಜ್ಯಗಳ ತೀರ್ಮಾನ ದ.ಕ. ಜಿಲ್ಲಾಡಳಿತದ ನಿದ್ದೆಗೆಡಿಸಿದೆ.
ಇದುವರೆಗೆ ಕರೊನಾ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ದ.ಕ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಈ ಹೊಸ ಬೆಳವಣಿಗೆ ಸವಾಲಿನದ್ದು. ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಗಡಿಯಲ್ಲಿ ಇದುವರೆಗೆ ಕೇರಳದಿಂದ ಯಾವುದೇ ರೋಗಿಯನ್ನು ಮಂಗಳೂರಿಗೆ ಬಿಡುತ್ತಿರಲಿಲ್ಲ. ಕಾಸರಗೋಡು ಜಿಲ್ಲೆಯೊಂದರಲ್ಲೇ 100ಕ್ಕೂ ಅಧಿಕ ಕರೊನಾ ಪಾಸಿಟಿವ್ ಸೋಂಕಿತರಿದ್ದು, ಅವರಿಂದ ಸಂಪರ್ಕಕ್ಕೊಳಗಾದವರು ಮಂಗಳೂರಿಗೆ ಬಂದರೆ ಕ್ಷಿಪ್ರವಾಗಿ ಹರಡಬಹುದು ಎಂಬ ತರ್ಕ ಇದರ ಹಿಂದೆ ಇತ್ತು.
ಆದರೆ ಕಾಸರಗೋಡಿನ ಸಂಸದ ರಾಜ್ವೋಹನ್ ಉಣ್ಣಿತ್ತಾನ್ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪ್ರಸ್ತುತ ಈ ವಿವಾದವನ್ನು ಉಭಯ ರಾಜ್ಯಗಳ ಉನ್ನತ ಅಧಿಕಾರಿಗಳು ಪರಸ್ಪರ ವಿಡಿಯೋ ಕಾನ್ಪರೆನ್ಸ್ ನಡೆಸಿ ಬಗೆಹರಿಸಿದ್ದಾರೆ. ಕೊವಿಡ್ -19 ಪ್ರಕರಣಗಳನ್ನು ಹೊರತುಪಡಿಸಿ ತುರ್ತು ಪ್ರಕರಣಗಳನ್ನು ಮಾತ್ರ ಮಂಗಳೂರಿಗೆ ತರುವುದಕ್ಕೆ ಈಗ ಅವಕಾಶ ಸಿಕ್ಕಿದೆ.
ಕರೊನಾ ವೈರಸ್ ಹೊರತುಪಡಿಸಿದ ಕಾಯಿಲೆಗೆ ತುರ್ತು ಚಿಕಿತ್ಸೆ ಬೇಕಾಗಿದ್ದು, ಆ ಚಿಕಿತ್ಸೆ ಕಾಸರಗೋಡಿನಲ್ಲಿ ಸಿಗದಿದ್ದಾಗ ಮತ್ತು ಆತನನ್ನು ಕಣ್ಣೂರಿಗೂ ಕೊಂಡೊಯ್ಯಲೂ ಅಸಾಧ್ಯವಾದಾಗ ಮಾತ್ರ ಮಂಗಳೂರಿಗೆ ಕರೆತರಬಹುದು.