ಹೈದರಾಬಾದ್​​ನಲ್ಲಿ ಮತ್ತಿಬ್ಬರು ಕೊರೊನಾ ವೈರಸ್​ ಪೀಡಿತರು ಪತ್ತೆ: ಪ್ರಾಥಮಿಕ ವರದಿಯಲ್ಲಿ ಸೋಂಕು ಹರಡಿರುವುದು ದೃಢ

coorona virus-1- 4 mar 20
Published on

ಹೈದರಾಬಾದ್​: ಹೈದರಾಬಾದ್​ನಲ್ಲಿ ಕೊರೊನಾ ವೈರಸ್​ ಪೀಡಿತರ ಸಂಖ್ಯೆ ಬುಧವಾರ 3ಕ್ಕೆ ಏರಿಕೆಯಾಗಿದೆ.

ಓರ್ವ ಟೆಕ್ಕಿ ಸೇರಿ ಇಬ್ಬರಲ್ಲಿ ವೈರಸ್​ ಸೋಂಕು ಪತ್ತೆಯಾಗಿದೆ. ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ ಎಂದು ತೆಲಂಗಾಣ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಿನ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್​ನ ಟೆಕ್ಕಿಗೆ ಸೋಂಕು ಹರಡಿತ್ತು. ಈಗ ಇನ್ನಿಬ್ಬರಿಗೆ ಹರಡಿದೆ.

ಪ್ರಾಥಮಿಕ ಪರೀಕ್ಷೆಯಲ್ಲಿ ಸೋಂಕು ಹರಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ರಕ್ತದ ಮಾದರಿಯನ್ನು ಅಂತಿಮ ಪರೀಕ್ಷೆಗಾಗಿ ಪುಣೆಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಹೊಸದಾಗಿ ವೈರಾಣು ಪತ್ತೆಯಾದ ಇಬ್ಬರಲ್ಲಿ ಒಬ್ಬರು ಇಟಲಿಗೆ ಪ್ರಯಾಣ ಬೆಳೆಸಿದ್ದರು. ಮತ್ತೊಬ್ಬರು ವೈರಸ್​ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ಪತ್ತೆಯಾದ ಇಬ್ಬರು ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದ 40ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇಡಲಾಗಿದೆ. ಅವರ ರಕ್ತದ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬುಧವಾರ ಹೈದರಾಬಾದ್​ನಲ್ಲಿ 47 ಮಂದಿ ವ್ಯಕ್ತಿಯ ರಕ್ತವನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಇಬ್ಬರಿಗೆ ಸೋಂಕು ಹರಡಿರುವುದು ಪತ್ತೆಯಾಗಿದೆ.
ಸೋಂಕು ಪತ್ತೆಯಾಗಿರುವ ಓರ್ವ ಟೆಕ್ಕಿ ಹೈದರಾಬಾದ್​​ನ ಮೈಂಡ್​ಸ್ಪೇಸ್​ ಕಟ್ಟಡದಲ್ಲಿರುವ ಡಿಎಸ್​ಎಂ ಕಂಪನಿ ಉದ್ಯೋಗಿ ಎಂದು ತಿಳಿದು ಬಂದಿದೆ. ಹೀಗಾಗಿ ಇಡೀ ಕಟ್ಟಡವನ್ನು ಶುದ್ಧೀಕರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net