

ನವದೆಹಲಿ: ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿರುವ ಕರೊನಾ ವೈರಸ್ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿದ್ದೆ ಗೆಡಿಸಿದೆ. 18,549 ಸೋಂಕಿತರು, ಒಂದೂ ಗುಣಮುಖವಾಗದ ಕೇಸ್, 416 ಮಂದಿಯ ಸಾವು... ಇದು ಮುಖ್ಯಮಂತ್ರಿಯನ್ನು ಕಂಗೆಡಿಸಿದೆ.
ದೆಹಲಿಗೆ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಿರುವ ಕಾರಣ, ಅದರಲ್ಲಿಯೂ ಈಗ ಲಾಕ್ಡೌನ್ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಸದ್ಯ ಗಡಿಯನ್ನು ಮುಚ್ಚಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಸದ್ಯ ಒಂದು ವಾರದ ಮಟ್ಟಿಗೆ ದೆಹಲಿಯ ಗಡಿಯನ್ನು ಮುಚ್ಚಲಾಗುವುದು. ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಅದನ್ನು ಹೊರತುಪಡಿಸಿದರೆ ಮತ್ತೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಗಡಿ ಬಂದ್ ಒಂದು ವಾರ ಇರುತ್ತದೆ. ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ನಾಗರಿಕರ ಹಾಗೂ ತಜ್ಞರ ಸಲಹೆಯ ಮೆರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದರು.
ಲಾಕ್ಡೌನ್ ಸಡಿಲಿಕೆ ಅಗಿರುವ ಹಿನ್ನೆಲೆಯಲ್ಲಿ, ಇಲ್ಲಿಯವರೆಗೆ ಮುಚ್ಚಲಾಗಿದ್ದ ಅಂಗಡಿಗಳನ್ನು ತೆರೆಯಲು ಅವರು ಅವಕಾಶ ಕಲ್ಪಿಸಿದ್ದಾರೆ. ಹಿಂದಿನ ಆದೇಶದಂತೆ ಆಟೋ ರಿಕ್ಷಾ ಹಾಗೂ ಇ- ರಿಕ್ಷಾಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಇವೂ ಸೇರಿದಂತೆ ಇತರ ವಾಹನಗಳಲ್ಲಿ ಪ್ರಯಾಣಿಸುವವರ ಮೇಲಿನ ನಿರ್ಬಂಧವನ್ನು ತೆಗೆದು ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಕ್ಷೌರಿಕ ಅಂಗಡಿ ಹಾಗೂ ಸಲೂನ್ಗಳನ್ನು ತೆರೆಯಲೂ ಅವರು ಅವಕಾಶ ಕಲ್ಪಿಸಿದ್ದಾರೆ.