

ಅಮೆರಿಕದ ನ್ಯೂಯಾರ್ಕ್ನ ಸರ್ಕಾರಿ ಕಚೇರಿಗಳೆಲ್ಲವೂ ಅಲ್ಬನಿ ನಗರದಲ್ಲಿವೆ. ಅಲ್ಬನಿ ಸೇರಿ ಒಟ್ಟಾರೆ ಅಮೆರಿಕದಲ್ಲಿ ಪ್ರಾರಂಭದಲ್ಲಿ ಕರೊನಾವನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಪರಿಸ್ಥಿತಿ ತುಸು ಗಂಭೀರವಾಯಿತು. ಈಗ 50 ರಾಜ್ಯದಲ್ಲೂ ಕರೊನಾ ಹರಡಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಶಾಲೆ, ಕಾಲೇಜುಗಳನ್ನು ಬಂದ್ ಮಾಡಲು ಹಾಗೂ ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ಏ.15ರವರೆಗೆ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿತ್ತು. ಈಗ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಪರಿಗಣಿಸಿ ಮೇ 15ರವರೆಗೆ ವಿಸ್ತರಣೆ ಮಾಡಲಾಗಿದೆ.
ನಮ್ಮ ಪ್ರದೇಶದಲ್ಲಿ ಪ್ರಾರಂಭದಲ್ಲಿ ಒಬ್ಬರಿಗೆ ಮಾತ್ರ ಕರೊನಾ ಸೋಂಕಿತ್ತು. ಸೋಂಕಿತ ಮಗುವೊಂದು ಶಾಲೆಗೆ ತೆರಳಿದ್ದರಿಂದ ಹೆಚ್ಚಳವಾಗಿ ಈಗ 20 ಜನಕ್ಕೆ ವಿಸ್ತಾರವಾಗಿದೆ. ಮಕ್ಕಳಿಗೆ ಶಾಲೆಯ ಹೋಮ್ರ್ಕ್ಗಳನ್ನು ಆನ್ಲೈನ್ನಲ್ಲಿ ಕೊಡುತ್ತಿದ್ದಾರೆ. ಮುಂದಿನ ವಾರದಿಂದ ತರಗತಿಗಳನ್ನೂ ವೆಬಿನಾರ್ ಮೂಲಕ ನಡೆಸುವ ಚಿಂತನೆ ನಡೆಸುತ್ತಿದ್ದಾರೆ. ನಮ್ಮ ಸಮೀಪದ ದೇವಸ್ಥಾನ ಬಂದ್ ಆಗಿದೆ, ಕನ್ನಡ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಯುಗಾದಿ ಕಾರ್ಯಕ್ರಮಗಳು ರದ್ದಾಗಿವೆ.
ಮನೆಯಲ್ಲೇ ಇದ್ದು ಮಕ್ಕಳು ಎಷ್ಟು ಟಿವಿ, ಇಂಟರ್ನೆಟ್ ನೋಡಲು ಸಾಧ್ಯ? ಕಳೆದ ವಾರದವರೆಗೂ ಪಾರ್ಲ್, ಸೈಕ್ಲಿಂಗ್ ಮಾಡಲು ಅವಕಾಶವಿತ್ತು, ಈಗ ಅದನ್ನೂ ರದ್ದುಪಡಿಸಲಾಗಿದೆ. ಮಕ್ಕಳಲ್ಲಿ ಈಗ ಸ್ವಲ್ಪ ಬಳಲಿಕೆ ಆರಂಭವಾಗುತ್ತಿದೆ. ದಿನಗೂಲಿ ನೌಕರರ ಸ್ಥಿತಿಯಂತೂ ಭಾರೀ ಕಷ್ಟವಾಗಿದೆ. ಸರ್ಕಾರದಿಂದ ಅನೇಕರಿಗೆ ಹಣ ನೀಡುವ, ಮಕ್ಕಳಿಗೆ ಉಚಿತವಾಗಿ ಊಟೋಪಹಾರ ನೀಡುವ ಪ್ರಯತ್ನ ನಡೆಸಲಾಗುತ್ತಿದೆ.
| ಬೆಂಕಿ ಬಸಣ್ಣ ಅಲ್ಬನಿ, ನ್ಯೂಯಾರ್ಕ್