17000 ದಾಟಿದ ಸೋಂಕಿತರ ಸಂಖ್ಯೆ: ದೇಶಾದ್ಯಂತ 24 ತಾಸಿನಲ್ಲಿ 36 ಜನರ ಸಾವು

Corona Car
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 17 ಸಾವಿರ ದಾಟಿದ್ದು, ಆತಂಕ ಉಲ್ಬಣವಾಗುವಂತೆ ಮಾಡಿದೆ. ಲಾಕ್​ಡೌನ್ ಅವಧಿ ವಿಸ್ತರಣೆ ಮಾಡಿದ್ದರೂ ಕೂಡ ದಿನೇ ದಿನೆ ಅಧಿಕ ಮಟ್ಟದಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ತಾಸಿನಲ್ಲಿ 1,415 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 17,137ಕ್ಕೆ ಏರಿಕೆಯಾಗಿದೆ. ಜತೆಗೆ ಕಳೆದ 24 ತಾಸಿನಲ್ಲಿ 36 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 556ಕ್ಕೆ ಏರಿಕೆಯಾಗಿದೆ.

ಈವರೆಗೆ 2,764 ಜನರು ಗುಣಮುಖರಾಗಿದ್ದು, ಸದ್ಯ ದೇಶದಲ್ಲಿ 13,817 ಸಕ್ರಿಯ ಪ್ರಕರಣಗಳಿವೆ. ಈವರೆಗೆ 3.86 ಲಕ್ಷ ವರದಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ತಮಿಳುನಾಡಿನಲ್ಲಿ ಹೊಸ ಪ್ರಕರಣಗಳ ಜತೆಗೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಭಾನುವಾರ 46 ಜನರು ಸೇರಿ ಈವರೆಗೆ 411 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಅತಿಹೆಚ್ಚು ಜನರು ಗುಣಮುಖರಾಗಿರುವುದು ಕೂಡ ಇಲ್ಲಿಯೆ. ಮಹಾರಾಷ್ಟ್ರದಲ್ಲಿ 365, ಕೇರಳ 270 ಹಾಗೂ ದೆಹಲಿಯಲ್ಲಿ 207 ಜನರು ಈವರೆಗೆ ಗುಣಮುಖರಾಗಿದ್ದಾರೆ. ಗುಜರಾತ್​ನಲ್ಲಿ 228 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 1,604ಕ್ಕೆ ಏರಿಕೆಯಾಗಿದೆ. ಐವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.

ಜಾಗತಿಕವಾಗಿ 1.62 ಲಕ್ಷ ಮಂದಿ ಮರಣ: ಕರೊನಾ ಮಹಾಮಾರಿಗೆ ವಿಶ್ವಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 1.62 ಲಕ್ಷ ದಾಟಿದ್ದು, ಮೃತರ ಸಂಖ್ಯೆ ಇನ್ನೂ ಏರಿಕೆ ಕಾಣುತ್ತಲೇ ಇದೆ. ಕಳೆದ 24 ತಾಸಿನಲ್ಲಿ 2,000 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1.62 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 33 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 23.63 ಲಕ್ಷಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 40 ಸಾವಿರದ ಗಡಿ ಸಮೀಪಿಸುತ್ತಿದ್ದು, ಸೋಂಕಿತರ ಸಂಖ್ಯೆ 7.40 ಲಕ್ಷಕ್ಕೆ ಏರಿಕೆಯಾಗಿದೆ. ಸ್ಪೇನ್​ನಲ್ಲಿ ಮೃತರ ಸಂಖ್ಯೆ 20 ಸಾವಿರದ ಗಡಿ ದಾಟಿದ್ದು, ಫ್ರಾನ್ಸ್​ನಲ್ಲಿ 19 ಸಾವಿರ ಸಾವುಗಳು ಸಂಭವಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net