

ನವದೆಹಲಿ: ಮಹಾಮಾರಿ ಕರೊನಾ ವೈರಸ್ ಹೆಚ್ಚು ಬಾಧಿತವಲ್ಲದ ಹಾಗೂ ನಾನ್ ಹಾಟ್ಸ್ಪಾಟ್ಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿ ಏಪ್ರಿಲ್ 20ರ ಸೋಮವಾರದಿಂದ ಲಾಕ್ಡೌನ್ನಲ್ಲಿ ಕೆಲ ವಿನಾಯಿತಿಗಳು ಸಿಗಲಿವೆ. ಕೇಂದ್ರ ಸರ್ಕಾರವು ಆರ್ಥಿಕ ಚಟುವಟಿಕೆ ಮತ್ತು ಕೆಲ ಸೇವಾ ಪಟ್ಟಿಗಳನ್ನು ಪರಿಸ್ಕರಿಸಿದ್ದು, ನಾಳೆಯಿಂದ ಅವುಗಳ ಪುನಾರಾಂಭಕ್ಕೆ ಅನುಮತಿ ನೀಡಿದೆ.
ಗೃಹ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಆದೇಶದ ಪ್ರಕಾರ ಲಾಕ್ಡೌನ್ ಮುಗಿಯುವವರೆಗೂ ಇ-ಕಾಮರ್ಸ್ ಕಂಪನಿಗಳ ಅವಶ್ಯವಲ್ಲದ ವಸ್ತುಗಳ ಪೂರೈಕೆಯನ್ನು ನಿಷೇಧಿಸಲಾಗಿದೆ. ಮೊಬೈಲ್ ಫೋನ್ಸ್, ಲ್ಯಾಪ್ಟಾಪ್, ಟಿವಿ ಸೆಟ್ಸ್ ಮತ್ತು ರೆಫ್ರಿಜರೇಟರ್ಸ್ನಂತಹ ವಸ್ತುಗಳ ಮಾರಾಟಕ್ಕೆ ಸರ್ಕಾರ ಕಳೆದ ವಾರ ಅನುಮತಿ ನೀಡಿತ್ತು.
ಆರ್ಥಿಕ ಚಟುವಟಿಕೆಯೊಂದಿಗೆ ಬಹುಮುಖ್ಯವಾಗಿ ಆರೋಗ್ಯ ಸೇವೆ (ಆಯುಷ್ ಸಚಿವಾಲಯ ಸೇರಿದಂತೆ) ಮತ್ತು ಬಾಂಕೇತರ ಹಣಕಾಸು ಸಂಸ್ಥೆ ಮತ್ತ ಸಣ್ಣ ಹಣಕಾಸು ಸಂಸ್ಥೆಗಳನ್ನು ಅಗತ್ಯ ಸೇವೆ ಎಂದು ಸರ್ಕಾರ ಗುರುತಿಸಿದೆ. ಕೃಷಿ ಮತ್ತು ತೋಟಗಾರಿಕೆ ಸಂಬಂಧ ಚಟುವಟಿಕೆಗಳಿಗೂ ಸರ್ಕಾರ ಅನುಮತಿಯನ್ನು ನೀಡಿದೆ.
ಮೀನುಗಾರಿಕೆ ಇಂಡಸ್ಟ್ರಿ (ಒಳನಾಡು ಮತ್ತು ಸಮುದ್ರ) ಮತ್ತು ಜಲಚರ ಸಾಕಣೆ ಹಾಗೂ ಪಸುಸಂಗೋಪನೆ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಟೀ ಹಾಗೂ ಕಾಫಿ ಎಸ್ಟೇಟ್ ಸೇರಿದಂತೆ ನೆಡುತೋಪು ಚಟುವಟಿಕೆಗಳು ಆರಂಭವಾಗಲಿದ್ದು, ಶೇ. 50 ರಷ್ಟು ಕಾರ್ಮಿಕರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಟ್ಟಿಗೆ ಯಾವುದೇ ಸಮಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ತೆಂಗು, ಅಡಿಕೆ, ಕೋಕಾ ಪ್ಲಾಂಟೇಶನ್ ಮತ್ತು ಅರಣ್ಯ ಉತ್ಪಾದನಾ ಚಟುವಟಿಕೆಗಳೂ ಕೂಡ ಕೇಂದ್ರ ಸರ್ಕಾರದ ಪಟ್ಟಿಯಲ್ಲಿದೆ.
ಕಟ್ಟಡ ನಿರ್ಮಾಣ, ಗ್ರಾಮಾಂತರ ಪ್ರದೇಶಗಳು, ನೀರು ಪೂರೈಕೆ ಮತ್ತು ನೈರ್ಮಲ್ಯ ಹಾಗೂ ವಿದ್ಯುತ್ ತಂತಿಗಳನ್ನು ಹಾಕುವುದು ಮತ್ತು ಟೆಲಿಕಾಂ ಆಪ್ಟಿಕಲ್ ಫೈಬರ್ಸ್ ಮತ್ತು ಕೇಬಲ್ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ.
ಕಟ್ಟಡ ನಿರ್ಮಾಣ ಕಾರ್ಯ ಸೇರಿದಂತೆ ಸೀಮಿತ ರೀತಿಯಲ್ಲಿ ಲಾಕ್ಡೌನ್ ಸಡಿಲಿಕೆಯು ಲಕ್ಷಾಂತರ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಗುಡ್ ನ್ಯೂಸ್ ಆಗಿದೆ. ಲಾಕ್ಡೌನ್ನಿಂದ ಕೆಲಸವಿಲ್ಲದೇ ಮನೆಯಲ್ಲಿಯೇ ಉಳಿಯುವ ಮೂಲಕ ಕಳೆಗುಂದಿದ್ದ ಶ್ರಮಿಕರಿಗೆ ಲಾಕ್ಡೌನ್ ಸಡಿಲಿಕೆ ಕೊಂಚ ರಿಲೀಫ್ ನೀಡಲಿದೆ.
ಲಾಕ್ಡೌನ್ ಸಡಿಲಿಕೆ ಸಂಬಂಧ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ವಿವರಣಾತ್ಮಕ ಟ್ವೀಟ್ ಮಾಡಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಏಪ್ರಿಲ್ 20 ನಂತರ ಯಾವೆಲ್ಲ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ ಎಂಬುದನ್ನು ವಿವರಿಸಿದ್ದಾರೆ. ವಿಶೇಷವೆಂದರೆ ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಅನ್ವಯವಾಗಲಿದೆ. ಎಲ್ಲ ಕಾರ್ಖಾನೆ ಮತ್ತು ಕೆಲಸದ ಸ್ಥಳಗಳು ಮತ್ತೆ ತೆರೆಯಲಿದ್ದು, ಕೇಂದ್ರ ಸರ್ಕಾರದ ಸಾಮಾಜಿಕ ಅಂತರ ಮಾರ್ಗಸೂಚಿಗೆ ಎಲ್ಲರೂ ಕಡ್ಡಾಯವಾಗಿ ಅಂಟಿಕೊಳ್ಳಬೇಕಾಗುತ್ತದೆ.
ನರೇಗಾ ಯೋಜನೆ ಎಂದಿನಂತೆಯೇ ನಡೆಯಲಿದ್ದು, ಕೂಲಿ ಕಾರ್ಮಿಕರು ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸದಲ್ಲಿ ತೊಡಗಬೇಕು. ಆನ್ಲೈನ್ ಶಿಕ್ಷಣ, ಅಗತ್ಯ ವಸ್ತುಗಳ ರವಾನೆ, ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳಾದ ಪ್ರಿಂಟ್, ಎಲೆಕ್ಟ್ರಾನ್ ಮೀಡಿಯಾ, ಡಿಟಿಎಚ್ ಮತ್ತು ಕೇಬಲ್ ಸೇವೆ, ಡಾಟಾ ಮತ್ತು ಕಾಲ್ ಸೆಂಟರ್ಗಳು (ಸರ್ಕಾರಿ ಚಟುವಟಿಕೆ ಮಾತ್ರ), ಕೊರಿಯರ್ ಸೇವೆ, ಹೋಟೆಲ್, ಹೋಮ್ಸ್ಟೇ ಮತ್ತು ಲಾಡ್ಜ್ಗಳ ಸೇವೆಗಳು ಮಾರ್ಗಸೂಚಿಗಳೊಂದಿಗೆ ಕಾರ್ಯಾರಂಭ ಮಾಡಲಿವೆ.
ಇವುಗಳೊಟ್ಟಿಗೆ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕೆಲಸವನ್ನು ಆರಂಭಿಸಲಿವೆ. (ಏಜೆನ್ಸೀಸ್)