

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ 6 ಹೊಸ ಕರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.
ಈ ಮೂಲಕ ರಾಜ್ಯದಲ್ಲಿ ವೈರಸ್ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇವರಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಧಾರವಾಡದ 35 ವರ್ಷ ದ ವ್ಯಕ್ತಿಗೆ ಸೋಂಕು ಹರಡಿರುವುದು ವರದಿಯಲ್ಲಿ ಖಚಿತವಾಗಿದೆ. ಇವರು ಮಾರ್ಚ್ 11ರಂದು ಪಣಜಿ ಮೂಲಕ ಧಾರವಾಡಕ್ಕೆ ಆಗಮಿಸಿದ್ದರು. ಇವರ ಜತೆ ಸಂಪರ್ಕಕ್ಕೆ ಬಂದ ನಾಲ್ವರನ್ನು ನಿಗಾದಲ್ಲಿ ಇರಿಸಲಾಗಿದೆ.
ಗೌರಿಬಿದನೂರಿನ 22 ವರ್ಷ ದ ಮಹಿಳೆಗೆ ಸೋಂಕು ತಗುಲಿದೆ. ಮಾ. 14 ರಂದು ಸೌದಿ ಅರೇಬಿಯಾದ ಮೆಕ್ಕಾದಿಂದ ವಿಮಾನದಲ್ಲಿ ಹೈದರಾಬಾದ್ಗೆ ಆಗಮಿಸಿ ಅಲ್ಲಿಂದ ಹಿಂದೂಪುರಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಹಿಂದೂಪುರದಿಂದ ಬಸ್ ಮೂಲಕ ಗೌರಿಬಿದನೂರಿಗೆ ಮರಳಿದ್ದರು. ಇವರೊಂದಿಗೆ ಸಂಪರ್ಕಕ್ಕೆ ಬಂದ ಹಲವರನ್ನು ಪತ್ತೆ ಮಾಡಲಾಗಿದೆ. ಉಳಿದವರ ಪತ್ತೆಗೆ ಸಿಬ್ಬಂದಿ ಮುಂದಾಗಿದ್ದಾರೆ.
ಬೆಂಗಳೂರಿನಿಂದ ಸ್ವಿಟ್ಜರ್ಲ್ಯಾಂಡ್ಗೆ ಪ್ರಯಾಣ ಬೆಳೆಸಿದ್ದ 36 ವರ್ಷದ ಮಹಿಳೆ ಫ್ರಾನ್ಸ್ ಮೂಲಕ ಮಾ.9ರಂದು ಬೆಂಗಳೂರಿಗೆ ಆಗಮಿಸಿದ್ದರು. ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ಖಾತ್ರಿಯಾಗಿದೆ.
ಬೆಂಗಳೂರಿನ 27 ವರ್ಷದ ವ್ಯಕ್ತಿಯೊಬ್ಬರು ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಅವರಿಗೂ ಸೋಂಕು ಇರುವುದು ದೃಢಪಟ್ಟಿದೆ. 51 ವರ್ಷದ ಬೆಂಗಳೂರಿನ ವ್ಯಕ್ತಿಯೊಬ್ಬರು ಮಾ.13ರಂದು ಬೆಂಗಳೂರಿಗೆ ಬಂದಿದ್ದರು ಅವರಲ್ಲೂ ಕೂಡ ಸೋಂಕು ಇರುವುದು ಈಗ ಪತ್ತೆಯಾಗಿದೆ. ಭಟ್ಕಳದ 21 ವರ್ಷದ ಯುವಕ ದುಬೈನಿಂದ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದು, ಅವರಿಗೂ ಸೋಂಕು ಹರಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.