

ಬೆಂಗಳೂರು: ಕೊರೊನಾ ದಿಢೀರ್ ಹಬ್ಬುವುದಿಲ್ಲ, ಗಾಳಿಯಲ್ಲೂ ಹರಡುವುದಿಲ್ಲ. ರಾಜ್ಯದಲ್ಲಿ ಅಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಈ ಕುರಿತು ಇಲ್ಲಸಲ್ಲದ ವದಂತಿಗಳಿಗೆ ಜನರು ಕಿವಿಗೊಡಬಾರದು. ಅಲ್ಲದೆ, ವೈಯಕ್ತಿಕ ಶುಚಿತ್ವ, ಮುಂಜಾಗ್ರತೆ ವಹಿಸಿ ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ವಿಧಾನಪರಿಷತ್ತಿನಲ್ಲಿ ಬುಧವಾರ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಅವರು, ಈ ರೋಗಕ್ಕೆ ನಿರ್ದಿಷ್ಟ ಕಾರಣ ಹೇಳುವುದು ಕಷ್ಟ, ನಿರ್ದಿಷ್ಟ ಚಿಕಿತ್ಸೆಯೂ ಇಲ್ಲ. ಕರೊನಾ ವೈರಸ್ಗೆ ಮದ್ದು ಕಂಡು ಹಿಡಿಯಲು ವಿಶ್ವವ್ಯಾಪಿ ಸಂಶೋಧನೆಗಳು ನಡೆದಿವೆ. ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿ ವಾಸನ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದವರಲ್ಲಿ ಒಬ್ಬರಾಗಿದ್ದು, ಯಾವುದೂ ಇನ್ನೂ ದೃಢಪಟ್ಟಿಲ್ಲ. ಆಯುರ್ವೆದದಲ್ಲೂ ಅಂತಹ ಔಷಧ ಅಥವಾ ಚಿಕಿತ್ಸೆಯಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಗಳನ್ನು ಜನರು ನಂಬಬಾರದು. ಹೊಸ ರೋಗ ತಲೆ ಎತ್ತಿದ ಸಂದರ್ಭದಲ್ಲಿ ಸಾಮಾಜಿಕ ಒಗ್ಗಟ್ಟು, ಮಾನಸಿಕ ಸ್ಥೈರ್ಯ ಮುಖ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅರಿವು, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನ ಸಾಗಿದ್ದು, ರಾಜ್ಯಮಟ್ಟದಲ್ಲಿ ನೋಡಲ್ ತಂಡ ಹಾಗೂ ಜಿಲ್ಲಾಮಟ್ಟದ ತ್ವರಿತ ಪ್ರಕ್ರಿಯಾ ತಂಡಗಳನ್ನು ರಚಿಸಿ ಅವರಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಆರು ಪದರುಗಳ ಮಾಸ್ಕ್ ಧರಿಸಿ
ಕೊರೊನಾ ವೈರಸ್ ರೋಗದ ಪ್ರಭಾವ, ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿ ರೋಗ ತಡೆಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯಂತೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಲ್ಲಿ ದೇಶದಲ್ಲಿಯೇ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು. ಅಗತ್ಯ ಕ್ರಮ, ಸಿದ್ಧತೆಗಳಿಗೆ ಅಗತ್ಯ ಅನುದಾನ ಬಳಕೆಗೆ ಮುಖ್ಯಮಂತ್ರಿ ಮುಕ್ತ ಅವಕಾಶ ನೀಡಿದ್ದಾರೆ. ಡಬ್ಲ್ಯುಎಚ್ಒ ಮಾರ್ಗಸೂಚಿಯಂತೆ 6 ಪದರುಗಳಿರುವ ಮಾಸ್ಕ್ ಧರಿಸಬೇಕು. ಅಂತಹ ಮಾಸ್ಕ್ಗಳಿಗೆ ಕೊರತೆಯಿಲ್ಲದಿದ್ದರೂ ಭಾರಿ ಬೇಡಿಕೆ ಲಕ್ಷ್ಯದಲ್ಲಿಟ್ಟುಕೊಂಡು ಮುಂದಿನ 6 ತಿಂಗಳಿಗೆ ಬೇಕಾಗುವಷ್ಟು ಮಾಸ್ಕ್ಗಳು ಮತ್ತು ಔಷಧ ಪೂರೈಕೆಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಸೋಂಕಿತರು ಸಾಯಲ್ಲ: ಕರೊನಾ ವೈರಸ್ ಪೀಡಿತರು ಸತ್ತೇ ಹೋಗುತ್ತಾರೆ ಎನ್ನುವ ಭೀತಿ ಖಂಡಿತ ಸರಿಯಲ್ಲ ಎಂದು ಸ್ಪಷ್ಪಪಡಿಸಿದ ಸುಧಾಕರ್, ವಿಶ್ವದಲ್ಲಿ 90,936 ಸೋಂಕಿತರ ಪೈಕಿ 48,130 ಚೇತರಿಸಿಕೊಂಡಿದ್ದಾರೆ. ಕೇರಳದಲ್ಲೂ ಮೂವರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
50 ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಸಾವಿರ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೇರೆ ದೇಶಗಳಿಂದ ಬಂದಿಳಿದ 20 ಸಾವಿರ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದ್ದು, ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ 50 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಪ್ರತ್ಯೇಕ ಹಾಸಿಗೆಗಳನ್ನು ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ ಎಂದು ಸುಧಾಕರ್ ವಿವರಿಸಿದರು.
ರಾಜ್ಯದಲ್ಲಿ ಕರೊನಾ ಸೋಂಕಿತರು ಇಲ್ಲ. ಆದರೆ, ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಯಾವುದೇ ಊಹಾಪೋಹಗಳಿಗೆ ಜನರು ಭಯಭೀತರಾಗಬಾರದು. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ