

ಕನಕಪುರ : ಕರೊನಾ ಸಂಕಷ್ಟದಲ್ಲಿ ವೈದ್ಯರು ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಮತ್ತು ಹಲವು ಸಂಘ ಸಂಸ್ಥೆಗಳ ಸೇವೆ ಅನನ್ಯ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕರೊನಾ ಸೇನಾನಿಗಳನ್ನು
ಸನ್ಮಾನಿಸಿ ಮಾತನಾಡಿದರು.
ಕರೊನಾದಿಂದ ಸಾವಿರಾರು ಜನರ ಪ್ರಾಣ ಉಳಿಸುವ ಮಹತ್ಕಾರ್ಯವನ್ನು ಗುರುತಿಸಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಸೋಂಕಿತರ ಸಮೀಪ ಸಂಬಂಧಿಕರೇ ಬಾರದ ಸ್ಥಿತಿ ನಿರ್ಮಾಣವಾಗಿದ್ದಾಗ ಚಿಕಿತ್ಸೆ ನೀಡಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಕರೊನಾ ಸೇನಾನಿಗಳು ಮಾಡಿದ್ದಾರೆ. ಜನರ ಕಣ್ಣೀರನ್ನು ಒರೆಸುವಂತಹ ಕೆಲಸವನ್ನು ಮಾಡಿದ್ದರಿಂದ ಇವರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದಾಗಿ ತಿಳಿಸಿದರು.
ಕರೊನಾ ಸಮಯದಲ್ಲಿ ರಾಮನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಾದ ದಯಾನಂದಸಾಗರ, ರಾಜರಾಜೇಶ್ವರಿ ಆಸ್ಪತ್ರೆ ಸೇರಿ ಎಲ್ಲ ಸರ್ಕಾರಿ ವೈದ್ಯರು ಚಿಕಿತ್ಸೆಗಾಗಿ ದಾಖಲಾದ ಸೋಂಕಿತರಿಗೆ ಕಾಳಜಿಯಿಂದ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ರಕ್ಷಿಸಿದ್ದಾರೆ ಎಂದು ಶ್ಲಾಸಿದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸೋಂಕಿತರನ್ನು ಸಂಬಂಧಿಕರೇ ನಿರ್ಲಕ್ಷ್ಯ ಮಾಡುತ್ತಿದ್ದುದನ್ನು ಮನಗಂಡ ನಾನು, ಸೋಂಕಿತರು ಮತ್ತು ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದೆ.
ಮೊದಲ ಹಾಗೂ 2ನೇ ಅಲೆಯಲ್ಲಿ ಬಹಳಷ್ಟು ಜನರನ್ನು ನಾವು ಕಳೆದುಕೊಂಡೆವು. ಜನರು ತಮ್ಮ ಆರೋಗ್ಯದ ಬಗೆಗಿನ ನಿರ್ಲಕ್ಷ್ಯದಿಂದ ಈ ಸಾವು-ನೋವುಗಳು ಹೆಚ್ಚಾಗಲು ಕಾರಣವಾಯಿತು. ಪ್ರತಿಯೊಬ್ಬರೂ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಅಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವ್, ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ನಗರಸಭಾಧ್ಯಕ್ಷ ಮಕ್ಬುಲ್‌ಪಾಷ, ಉಪಾಧ್ಯಕ್ಷ ಗುಂಡಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ತಮ್ಮಣ್ಣಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ಹೊಸಕೋಟೆ ಪುರುಷೋತ್ತಮ್, ತಾ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್, ಮಾಜಿ ಉಪಾಧ್ಯಕ್ಷ ಕೋಡಿಹಳ್ಳಿ ಮಹದೇಶ್, ಗ್ರಾಪಂ. ಮಾಜಿ ಅಧ್ಯಕ್ಷ ಏಳಗಳ್ಳಿ ರವಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್ ಮತ್ತಿತರರು ಇದ್ದರು.