

ತಿರುವನಂತಪುರಂ: ಚೀನಾದಲ್ಲಿ ಮಾರಕ ರೋಗವಾಗಿ ಹಬ್ಬಿಕೊಂಡಿರುವ ಕೊರೊನಾ ಎಫೆಕ್ಟ್ ಕೇರಳದ ಪ್ರವಾಸೋದ್ಯಮದ ಮೇಲೆ ಬೀಳತೊಡಗಿದೆ. ಚೀನಾದಿಂದ ಕೇರಳಕ್ಕೆ ಬಂದಿರುವ ಮೂರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೆ ರಾಜ್ಯದ ಹೋಟೆಲ್ಗಳಲ್ಲಿ ಈ ಮೊದನೇ ಬುಕ್ಕಿಂಗ್ ಆಗಿದ್ದ ರೂಂಗಳನ್ನು ಪ್ರವಾಸಿಗರು ಕ್ಯಾನ್ಸಲ್ ಮಾಡಲಾರಂಭಿಸಿದ್ದಾರೆ.
ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಕೇರಳಕ್ಕೆ ಬಂದಿರುವ ಮೂರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಇರುವುದು ಖಾತ್ರಿಯಾಗಿದೆ. ಈ ಮೂವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿದ್ದಾಗ ಕೇರಳಕ್ಕೆ ಪ್ರವಾಸಕ್ಕೆ ಬರಲು ಜನರು ಹೆದರುತ್ತಿದ್ದಾರೆ. ದೇವರ ನಾಡು ಎಂದು ಕರೆಸಿಕೊಳ್ಳುವ ರಾಜ್ಯದಲ್ಲಿರುವ ಹೋಟೆಲ್, ಲಾಡ್ಜ್ಗಳಲ್ಲಿ ಈ ಮೊದಲೇ ಬುಕ್ ಆಗಿದ್ದ ರೂಂಗಳನ್ನು ಪ್ರವಾಸಿಗರು ಕ್ಯಾನ್ಸಲ್ ಮಾಡಲಾರಂಭಿಸಿದ್ದಾರೆ. ಇದರಿಂದಾಗಿ ಕೇರಳ ಪ್ರವಾಸೋದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಬೀಳುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿಳಿಸಿದ್ದಾರೆ.
2018ರಲ್ಲಿ ನಿಫಾ ವೈರಸ್ ದಾಳಿಯಿಂದಾಗಿ ರಾಜ್ಯದಲ್ಲಿ 17 ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿಯೂ ಸಹ ಕೇರಳ ಪ್ರವಾಸೋದ್ಯಮ ಇಂತದ್ದೇ ಸಮಸ್ಯೆಯನ್ನು ಎದುರಿಸಿತ್ತು. ಆದರೆ ಈ ಭಾರೀ ಪ್ರವಾಸೋದ್ಯಮಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಹೊಡೆತ ಉಂಟಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಜನರಲ್ಲಿ ಇಷ್ಟರ ಮಟ್ಟಿಗೆ ಭಯ ಹುಟ್ಟಲು ಮಾಧ್ಯಮದವರೇ ಕಾರಣ ಎಂದು ದೂರಿರುವ ಅವರು, "ಎಚ್ಚರಿಕೆಯಿಂದಿರಬೇಕು ಎನ್ನುವುದು ಸತ್ಯ, ಆದರೆ ಅದರ ಬಗ್ಗೆ ಭಯ ಹುಟ್ಟಿಸಬಾರದು. ಭಯ ಹುಟ್ಟಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದ್ದಾವೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)