ಪತಿಗೆ ಕರೊನಾ ಸೋಂಕಿರುವ ಮಾಹಿತಿ ಬಚ್ಚಿಟ್ಟ ಗರ್ಭಿಣಿ: ತಾಯಿ- ಹಸುಗೂಸು ಬೇರ್ಪಡಿಸಿದ ಕರೊನಾ

Coronavirus 16 march 20
Published on

ಬೆಂಗಳೂರು: ಪತಿಗೆ ಕರೊನಾ ಸೋಂಕಿರುವ ಮಾಹಿತಿ ಮುಚ್ಚಿಟ್ಟ ಗರ್ಭಿಣಿ ಕುರುಬರಹಳ್ಳಿಯ ಲೋಟಸ್ ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದರೆ, ಈಕೆ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ನವಜಾತ ಶಿಶುವನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಪತಿಗೆ ಸೋಂಕು ಇರುವ ಮಾಹಿತಿ ಹೆರಿಗೆ ಆದ ನಂತರ ಗೊತ್ತಾಗಿದೆ. ಇವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ದಾದಿಯರನ್ನು ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಿ ಆಸ್ಪತ್ರೆಯನ್ನು ಬಂದ್ ಮಾಡಿಸಲಾಗಿದೆ. ಆಸ್ಪತ್ರೆ ಸುತ್ತಮುತ್ತ ಔಷಧಿ ಸಿಂಪಡಣೆ ಮಾಡಲಾಗಿದೆ. ಆಸ್ಪತ್ರೆ ಪಕ್ಕದ ಕಟ್ಟಡದ ವಾಸಿಗಳ ಮೇಲೂ ನಿಗಾ ಇಡಲಾಗಿದೆ. ತಾಯಿ ಮತ್ತು ನವಜಾತ ಶಿಶುವಿನ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್​ನ ಅಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ಧೆಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ವೃದ್ಧೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ನೆಗೆಟಿವ್ ಬಂದಿದೆಯಾದರೂ ಸ್ವಯಂ ನಿಗಾಕ್ಕೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net