

ನವದೆಹಲಿ/ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ ಏರುತ್ತಲೇ ಇದ್ದು ಇಂದು (ಏ.1)ಕ್ಕೆ ಇದರ ಸಂಖ್ಯೆ 1,637ಕ್ಕೆ ಏರಿದೆ. ಈ ಪೈಕಿ 38 ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೇ ಕರ್ನಾಟಕದಲ್ಲಿ ಸೋಂಕಿತ ಸಂಖ್ಯೆ 105ಕ್ಕೆ ಏರಿಕೆ ಆಗಿದೆ.
ದೇಶದಲ್ಲಿ 1,637 ಸೋಂಕಿತ ಪೈಕಿ 1,466 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 132 ಮಂದಿ ಗುಣಮುಖರಾಗಿದ್ದಾರೆ. ದೆಹಲಿ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಮತ್ತು ಬಿಹಾರದಲ್ಲಿ ಮಂಗಳವಾರ ಅತ್ಯಧಿಕ ಹೊಸ ಸೋಂಕಿತರ ಪ್ರಕರಣಗಳು ದಾಖಲಾಗಿವೆ.
ಈ ನಡುವೆ, ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಬೃಹತ್ ಧಾರ್ಮಿಕ ಕೂಟದಲ್ಲಿ ಭಾಗವಹಿಸಿರುವವರಿಗಾಗಿ ಹುಡುಕಾಟ ನಡೆದಿದೆ. ಅಲ್ಲಿ ಭಾಗವಹಿಸಿರುವ ಸಾವಿರಾರು ಮಂದಿಗೆ ಕರೊನಾ ಸೋಂಕು ಹರಡಿರುವ ಸಾಧ್ಯತೆ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಇದೇ ವೇಳೆ. ಕರ್ನಾಟಕದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 105ಕ್ಕೆ ಏರಿದೆ. ನಿನ್ನೆ ಸಂಜೆಯಿಂದ ಈಗಿನವರೆಗೆ ಮೂರು ಪ್ರಕರಣಗಳು ಹೆಚ್ಚಾಗಿವೆ. ಇದುವರೆಗೆ ಮೂವರು ಮೃತಪಟ್ಟಿದ್ದು, 9 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಇಬ್ಬರು ಯುವಕರಿಗೆ ಸೋಂಕು ತಗುಲಿರುವ ಶಂಕೆ ಇರುವ ಹಿನ್ನೆಲೆಯಲ್ಲಿ, ಇವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಇಬ್ಬರು ವ್ಯಕ್ತಿಗಳು ಸೋಂಕಿತರೊಬ್ಬರ ಔಷಧ ತಯಾರಿಕೆ ಕಂಪನಿಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಕಾರಣ, ಅವರ ಬಗ್ಗೆಯೂ ವಿಚಾರಣೆ ನಡೆದಿದೆ. ರಾಜ್ಯದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಿಗೆ ಆಯಾ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೆಲಸ ಮಾಡುವಂತೆ ಸರ್ಕಾರ ಆದೇಶಿಸಿದೆ. (ಏಜೆನ್ಸೀಸ್)