ಕರೊನಾ ಟೆಸ್ಟ್​ ಮಾಡಿಸಿಕೊಂಡ ಕೇಜ್ರಿವಾಲ್​: ವರದಿ ಬರುವವರೆಗೂ ಡವಡವ

kejriwal
Published on

ನವದೆಹಲಿ: ದಿನದಿಂದ ದಿನಕ್ಕೆ ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈ ನಡುವೆಯೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರಿಗೂ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ಕಾರಣ, ಇದಾಗಲೇ ಸ್ವಯಂ ಗೃಹಬಂಧನದಲ್ಲಿ ಇರುವ ಕೇಜ್ರಿವಾಲ್​ ಇಂದು ಬೆಳಗ್ಗೆ ತಪಾಸಣೆ ಮಾಡಿಸಿಕೊಂಡು ಬಂದಿದ್ದಾರೆ. ಇಂದು ಸಂಜೆಯ ವೇಳೆಗೆ ವರದಿ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪರೀಕ್ಷೆ ಕುರಿತಂತೆ ಮಾಹಿತಿ ನೀಡಿರುವ ವೈದ್ಯರು, ಕರೊನಾ ಲಕ್ಷಣ ಕಂಡುಬಂದ ಪರಿಣಾಮ ಕೇಜ್ರಿವಾಲ್ ಅವರನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಶೀಘ್ರದಲ್ಲೇ ವರದಿ ಬರಲಿದೆ ಎಂದು ಹೇಳಿದ್ದಾರೆ. ಆದರೆ ಸದ್ಯ ಜ್ವರದ ತಾಪಮಾನ ತಗ್ಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಜ್ವರದ ಜತೆ ಗಂಟಲಿನಲ್ಲಿ ಕೆರೆತವೂ ಉಂಟಾಗಿದೆ. ಮಧು­ಮೇಹ ರೋಗಿಯಾಗಿರುವ ಅವ­ರನ್ನು ತಕ್ಷಣದಲ್ಲೇ ಕ್ವಾರಂಟೈನ್‌ಗೆ ತೆರಳಿ, ಪರೀಕ್ಷೆ ನಡೆಸುವಂತೆ ಕೋರಿದ್ದರು.

ಈ ನಡುವೆ ದೆಹಲಿಯಲ್ಲಿ ಒಟ್ಟು 27,654 ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 10,664 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇದಾಗಲೇ 761 ಮಂದಿ ದೆಹಲಿಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net