

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯಲು ಸೋಂಕಿತರಿಗೆ ಅನುವು ಮಾಡಿಕೊಟ್ಟಿದೆ.
ಇಲ್ಲಿಯವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲವರು ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದರ ಹೆಚ್ಚಿಗೆ ಇರುವ ಹಿನ್ನೆಲೆಯಲ್ಲಿ ಸರ್ಕಾರವೇ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಳೆದ ವಾರ ದರ ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಈ ಬಗ್ಗೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಅನುಮತಿಯನ್ನು ಕೇಳಿತ್ತು. ಈ ದರಕ್ಕೆ ಸಂಬಂಧಿಸಿದಂತೆ ಎಲ್ಲಾ ಆಸ್ಪತ್ರೆಗಳು ನೀಡಿರುವ ಮಾಹಿತಿ ಹಾಗೂ ಎಲ್ಲರ ಒಪ್ಪಿಗೆ ಮೇರೆಗೆ ಅಂತಿಮವಾಗಿ ಅಧಿಕೃತ ದರ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಮಾಡಿದ ಕರೊನಾ ಸೋಂಕಿತರಿಗೆ ಒಂದು ರೀತಿಯ ದರವಿದ್ದು, ನಗದು ಪಾವತಿ (ವಿಮೆ ಅಲ್ಲದ) ಮಾಡುವ ಪಿಎಚ್ ಪಿಗಳಿಂದ ನೇರವಾಗಿ ಪ್ರವೇಶ ಪಡೆದ ಖಾಸಗಿ ರೋಗಿಗಳಿಗೆ ಮತ್ತೊಂದು ರೀತಿಯ ದರ ನಿಗದಿ ಮಾಡಲಾಗಿದೆ.
ಅದರ ಸಂಪೂರ್ಣ ವಿವರ ಇಲ್ಲಿದೆ:
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಮಾಡಿರುವ ಸೋಂಕಿತರಿಗೆ ಒಂದು ದಿನದ ದರ:
ಜನರಲ್ ವಾರ್ಡ್- 5,200 ರೂ
ಎಚ್‌ಡಿಯು- 7,000 ರೂ
ಐಸೋಲೇಷನ್ ಐಸಿಯು (ವೆಂಟಿಲೇಟರ್ ರಹಿತ)- 8,500 ರೂ
ಐಸೋಲೇಷನ್ ಐಸಿಯು (ವೆಂಟಿಲೇಟರ್ ಸಹಿತ)-10,000 ರೂ
ನಗದು ಪಾವತಿ (ವಿಮೆ ಅಲ್ಲದ) ವಿಎಚ್‌ಪಿಗಳಿಂದ ನೇರವಾಗಿ ಪ್ರವೇಶ ಪಡೆಯುವವರ ದರ ಒಂದು ದಿನಕ್ಕೆ
ಜನರಲ್ ವಾರ್ಡ್- 10, 000 ರೂ.
ಎಚ್‌ಡಿಯು- 12,000 ರೂ.
ಐಸೋಲೇಷನ್ ಐಸಿಯು (ವೆಂಟಿಲೇಟರ್ ರಹಿತ)- 15,000 ರೂ
ಐಸೋಲೇಷನ್ ಐಸಿಯು (ವೆಂಟಿಲೇಟರ್ ಸಹಿತ)-25,000 ರೂ