ರಜನಿಕಾಂತ್‌ಗೆ ಕರೊನಾ ಪಾಸಿಟಿವ್: ಜೋಕ್ ಮಾಡಿ ಬೈಸಿಕೊಂಡ ಹಿಂದಿ ನಟ!

rajanikant
Published on

ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ ಅಂತ ಜೋಕ್ ಮಾಡಿದ ನಟ ರೋಹಿತ್ ರಾಯ್ ಈಗ ಅದಕ್ಕಾಗಿ ಸಿಕ್ಕಾಪಟ್ಟೆ ಪಶ್ಚಾತ್ತಾಪ ಪಡುವಂತಾಗಿದೆ.

ಇನ್ಸ್ಟಾಗ್ರಾಂನಲ್ಲಿರುವ ತನ್ನ ಅಕೌಂಟ್‌ನಲ್ಲಿ ರೋಹಿತ್ ರಾಯ್, ‘‘ರಜನಿಕಾಂತ್ ಟೆಸ್ಟೆಡ್ ಪಾಸಿಟಿವ್ ಫಾರ್ ಕರೊನಾ. ಕರೊನಾ ಈಸ್ ನೌ ಅಂಡರ್ ಕ್ವಾರಂಟೈನ್’’ (ರಜನಿಕಾಂತ್‌ಗೆ ಕರೊನಾ ಬಂದಿದೆ. ಕರೊನಾವನ್ನೇ ಕ್ವಾರಂಟೈನ್ ಮಾಡಲಾಗಿದೆ) ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದ.

ಜತೆಗೆ ‘‘ಕರೊನಾವನ್ನು ಸೋಲಿಸೋಣ!! ನೀವು ಕೆಲಸಕ್ಕೆ ಹೋದಾಗ ಸೇಫಾಗಿರಿ! ಮಾಸ್ಕ್ ಧರಿಸಿ, ಪ್ರತಿದಿನವೂ ಮಾಸ್ಕ್ ಅನ್ನು ತೊಳೆಯಿರಿ, ದಿನಕ್ಕೆ ಹಲವು ಬಾರಿ ಸ್ಯಾನಿಟೈಸರ್ ಬಳಸಿ... ಕರೊನಾಕ್ಕೆ ನಾವು ಅವಕಾಶ ಕೊಡದಿದ್ದರೆ ಅದು ನಮ್ಮ ಬಳಿ ಬರಲು ಸಾಧ್ಯವಿಲ್ಲ- ಸೇಫಾಗಿರಿ’’ ಎಂದೂ ಬರೆದಿದ್ದ.

ಆದರೆ ಇದನ್ನು ಎಲ್ಲರೂ ಜೋಕ್ ಆಗಿ ತೆಗೆದುಕೊಳ್ಳಲೇ ಇಲ್ಲ. ರಜನಿಕಾಂತ್‌ರ ಅಭಿಮಾನಿಗಳಂತೂ ಇದನ್ನೊಂದು ಜೋಕ್ ಅಂತ ಒಪ್ಪಿಕೊಳ್ಳಲೇ ಇಲ್ಲ. ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ರಾಯ್‌ನನ್ನು ಟ್ರೋಲ್ ಮಾಡತೊಡಗಿದರು.

ಇದರಿಂದ ಬೆಚ್ಚಿಬಿದ್ದ ರೋಹಿತ್, ‘‘ಸಮಾಧಾನ ಮಾಡಿಕೊಳ್ಳಿ, ಇದು ಒಂದು ಜೋಕ್ ಅಷ್ಟೆ. ಕ್ಷಮಿಸಿ, ಇದು ಬ್ಯಾಡ್ ಟೇಸ್ಟ್ ಹೊಂದಿರುವ ಜೋಕ್ ಅಂತ ನನಗಂತೂ ಅನ್ನಿಸುತ್ತಿಲ್ಲ. ರಜನಿಕಾಂತ್ ಕುರಿತ ಈ ಹಿಂದಿನ ಜೋಕ್‌ಗಳಂತೆಯೇ ಇದೂ ಇದೆ. ನಿಮ್ಮನ್ನೆಲ್ಲ ನಗಿಸುವದಷ್ಟೇ ನನ್ನ ಉದ್ದೇಶವಾಗಿತ್ತು. ನೀವು ಕಾಮೆಂಟ್ ಮಾಡುವ ಮೊದಲು ನನ್ನ ಉದ್ದೇಶ ಏನಿತ್ತೆಂಬುದನ್ನು ಗಮನಿಸಿ. ನಾನು ನಿಮ್ಮನ್ನು ನೋಯಿಸಲು ಈ ಪೋಸ್ಟ್ ಹಾಕಲಿಲ್ಲ. ಆದರೆ ನೀವೆಲ್ಲ ನನ್ನನ್ನು ನೋಯಿಸಲೆಂದೇ ಕಾಮೆಂಟ್ ಮಾಡುತ್ತಿದ್ದೀರಿ’’ ಎಂದು ಸಮಜಾಯಿಷಿ ನೀಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net