

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕರೊನಾ ಪಾಸಿಟಿವ್ ಬಂದಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲೇ ಇದ್ದಾರೆ. ಇನ್ನೆರಡು ದಿನದಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣಾ ಪ್ರಚಾರಕ್ಕೆ ಬಾಲಚಂದ್ರ ಜಾರಕಿಹೊಳಿ ಬರ್ತಾರೆ. ರಮೇಶ್ ಚೇತರಿಕೆ ಬಳಿಕ ಚುನಾವಣಾ ಪ್ರಚಾರಕ್ಕೆ ಬರೋದಾಗಿ ಹೇಳಿದ್ದಾರೆ. ರಮೇಶ್ ಮತ್ತು ಬಾಲಚಂದ್ರ ಜತೆ ನಿನ್ನೆ ಫೋನ್ನಲ್ಲಿ ಮಾತನಾಡಿದ್ದೇನೆ ಎಂದರು. ಇತ್ತ ಸಿಡಿ ಕೇಸ್ನ ಯುವತಿ ನ್ಯಾಯಾಧೀಶರ ಮುಂದೆ ಹಾಜರ್ ಆಗಿ ಒಂದು ವಾರ ಆಗಿದೆ. ಅಂದಿನಿಂದ ರಮೇಶ್ ನಾಪತ್ತೆಯಾಗಿದ್ದು, ಅವರು ಎಲ್ಲಿ ಹೋದರು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಮೂಡಿತ್ತು.
ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರ ಆರೋಪಿಯನ್ನು ರಾಜಮರ್ಯಾದೆಯಲ್ಲಿ ನೆಪಮಾತ್ರದ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.