

ಬೆಂಗಳೂರು: ಆಂಬುಲೆನ್ಸ್ ಬಾರದಿದ್ದಕ್ಕೆ ಅಸಮಾಧಾನಗೊಂಡ ಕರೊನಾ ಸೋಂಕಿತನೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಿಎಂ ನಿವಾಸ ಕಾವೇರಿ ಬಳಿಗೆ ಬಂದ ಘಟನೆ ಇಂದು(ಗುರುವಾರ) ನಡೆದಿದೆ.
'ನನಗೆ ಕರೊನಾ ಪಾಸಿಟಿವ್ ಇದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಎಲ್ಲೂ ಬೆಡ್ ಸಿಗುತ್ತಿಲ್ಲ. ಆಂಬುಲೆನ್ಸ್ ಬರ್ತಿಲ್ಲ ...ಸುಸ್ತಾಗ್ತಿದೆ ಆಸ್ಪತ್ರೆಗೆ ಶಿಫ್ಟ್ ಮಾಡಿ.. ಸಿಎಂ ಸರ್ ದಯವಿಟ್ಟು ಟ್ರೀಟ್ಮೆಂಟ್ ಕೊಡ್ಸಿ...' ಎಂದು ಕರೊನಾ ಸೋಂಕಿತನು ಸಿಎಂ ಮನೆ ಬಳಿ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ದೃಶ್ಯ ರಾಜ್ಯದ ದುರ್ಗತಿಯನ್ನೇ ಅನಾವರಣ ಮಾಡಿದಂತಿತ್ತು.
ಚಿಕಿತ್ಸೆ ಕೊಡಿಸುವಂತೆ ಸಿಎಂ ಮನೆ ಬಳಿಗೆ ಬಂದಿದ್ದ ಕರೊನಾ ಸೋಂಕಿತ ವ್ಯಕ್ತಿ ಬನಶಂಕರಿಯ ಅಂಬೇಡ್ಕರ್ ನಗರದ ನಿವಾಸಿ. ಲಾಕ್ಡೌನ್ ಸಂದರ್ಭದಲ್ಲಿ ಅಲ್ಲಿಂದ ಸಿಎಂ ನಿವಾಸದ ಬಳಿಗೆ ಕುಟುಂಬದೊಂದಿಗೆ ತುಂಬಾ ಕಷ್ಟಪಟ್ಟುಕೊಂಡು ಬಂದಿದ್ದ ಅವರನ್ನ ಒಂದು ಕಡೆ ನಿಲ್ಲಿಸಿದ್ದ ಭದ್ರತಾ ಸಿಬ್ಬಂದಿ, ಆಂಬುಲೆನ್ಸ್ ಕರೆಸುವುದಾಗಿ ಭರವಸೆ ನೀಡಿದರು. ಆದರೆ, ತುಂಬಾ ಪ್ರಯಾಸ ಪಡುತ್ತಿದ್ದ ಸೋಂಕಿತನು 'ಮುಖ್ಯಮಂತ್ರಿಗಳೇ ಬೇಗ ಆಸ್ಪತ್ರೆಗೆ ಸೇರಿ.. ನನಗೆ ಸುಸ್ತು ಆಗ್ತಿದೆ.. ಆಂಬುಲೆನ್ಸ್ ಕರೆಸಿ.. ' ಎಂದು ಗೋಗರೆಯುತ್ತಿದ್ದ ಪರಿ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು.
ಸಿಎಂ ನಿವಾಸದ ಬಳಿಯಿದ್ದ ಪೊಲೀಸರು ಆಂಬುಲೆನ್ಸ್ ಕರೆಸಿ ಕರೊನಾ ಸೋಂಕಿತನನ್ನು ಕುಟುಂಬ ಸಮೇತ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಸೋಂಕಿತನ ಪತ್ನಿಗೂ ಜ್ವರ ಇತ್ತು ಎನ್ನಲಾಗಿದೆ.
ಕೋವಿಡ್ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವಂತಾಗಬೇಕು. ಆಂಬುಲೆನ್ಸ್ ಸೇವೆ, ಬೆಡ್ ಅಭಾವ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ಹಲವು ಏರಿಯಾಗಳಲ್ಲಿ ಜನರಿಗೆ ಕರೊನಾ ಸೋಂಕು ದೃಢಪಟ್ಟು ಎರಡ್ಮೂರು ದಿನಗಳಾದರೂ ಆಂಬುಲೆನ್ಸ್ ಬಾರದ, ಬೆಡ್ ಸಿಗದ ನಿದರ್ಶನಗಳು ಸಾಕಷ್ಟು ಇವೆ. ಇದೀಗ ಜನರೇ ರಾಜ್ಯದ ಸಿಎಂ ಮನೆ ಬಾಗಿಲಿಗೆ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡು ಹೋಗುತ್ತಿರುವ ಪ್ರಹಸನ ಕರೊನಾ ಕರಾಳತೆಯ ನೈಜಸ್ಥಿತಿಯನ್ನು ತೆರೆದಿಟ್ಟಿದೆ.
ಲಾಕ್ಡೌನ್ ಸಂದರ್ಭದಲ್ಲಿ ಆಗಬೇಕಿದ್ದ ತಯಾರಿಗಳು ಈ ಹಿಂದೆ ಆಗಿಲ್ಲ. ಇಂದೊಂದು ಒಳ್ಳೆಯ ಅವಕಾಶ. ಈಗ ಲಾಕ್ಡೌನ್ ಜಾರಿಯಲ್ಲಿದ್ದು, ಕೂಡಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇನ್ನಾದೂ ಬಿಬಿಎಂಪಿ ಮತ್ತು ಆರೋಗ್ಯ ಅಧಿಕಾರಿಗಳು ಜನರಿಗೆ ಕಷ್ಟಕ್ಕೆ ಕೂಡಲೇ ಸ್ಪಂದಿಸುವ ಮೂಲಕ ಸಾವು-ನೋವನ್ನು ನಿಯಂತ್ರಿಸಬೇಕಿದೆ.
ಸಿಎಂ ಮನೆ ಬಳಿ ಕರೊನಾ ಸೋಂಕಿತ ಕುಟುಂಬ ಸಮೇತ ಬಂದ ಮತ್ತಷ್ಟು ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.