ವೈದ್ಯೆಗೆ ಸಿಕ್ಕಿತು ಭಾವುಕ ಸ್ವಾಗತ: ವೀಡಿಯೋ ನೋಡಿ ಮನ ತುಂಬಿ ಬಂತು ಎಂದು ಮೋದಿ ಟ್ವೀಟ್​

modi1
Published on

ನವದೆಹಲಿ: ಕರೊನಾ ಸೋಂಕು ಹರಡದಂತೆ ಮನೆಯೊಳಕ್ಕೆ ಸುಮ್ಮನೇ ಇರಿ ಎಂದರೆ ಮಾತು ಕೇಳದ ಭಂಡರು ಅದೆಷ್ಟೋ ಮಂದಿ. ಆದರೆ ಹಗಲು ರಾತ್ರಿಯೆನ್ನದೇ, ತನ್ನವರು, ತನ್ನ ಮಕ್ಕಳು, ಸಂಬಂಧಿಕರು ಎಲ್ಲರಿಂದಲೂ ದೂರವಾಗಿ ಹಗಲಿರುಳು ಸೋಂಕಿತರ ಸೇವೆಯಲ್ಲಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರು ಇನ್ನೊಂದೆಡೆ.

ಕರೊನಾ ಎಂದರೇನೇ ಬೆಚ್ಚಿ ಬೀಳುವ ಈ ಸಮಯದಲ್ಲಿ ಸದಾ ಸೋಂಕಿತರ ಸೇವೆಯಲ್ಲಿಯೇ ತೊಡಗಿಸಿಕೊಂಡಿರುವುದು ಸುಲಭದ ಮಾತಲ್ಲ. ಎಷ್ಟೇ ಜಾಗರೂಕರಾಗಿದ್ದರೂ, ರಕ್ಷಣಾ ಕವಚಗಳನ್ನು ತೊಟ್ಟಿದ್ದರೂ ಈ ಸೋಂಕು ಎಂಬ ಮಹಾಮಾರಿ ಹೇಗೆ ಒಕ್ಕರಿಸಿಬಿಡುತ್ತದೆಯೋ ಎಂಬ ಆತಂಕದಲ್ಲಿ ಕರೊನಾ ವಾರಿಯರ್ಸ್​ ದುಡಿಯುತ್ತಿದ್ದಾರೆ.

ಅಂಥದ್ದೇ ಒಬ್ಬ ಕರೊನಾ ಯೋಧೆ ದೆಹಲಿಯ ವೈದ್ಯೆ. 20 ದಿನಗಳು ಹಗಲು ರಾತ್ರಿ ಎನ್ನದೇ ಐಸಿಯು ವಿಭಾಗದಲ್ಲಿ ಕರೊನಾ ಸೋಂಕಿತರಿಗೆ ಸೇವೆ ಸಲ್ಲಿಸುತ್ತ, ಕ್ವಾರಂಟೈನ್​ ಅವಧಿಯನ್ನೂ ಮುಗಿಸಿ ಮನೆಗೆ ಬಂದಾಗ ಕುಟುಂಬಸ್ಥರಿಗೆ ಆಕೆಗೆ ಸಿಕ್ಕ ಸ್ವಾಗತ ಎಂಥವರನ್ನೂ ಒಂದು ಕ್ಷಣ ಭಾವುಕರನ್ನಾಗಿ ಮಾಡಿಬಿಡುತ್ತದೆ.

ತನ್ನವರಿಂದಲೇ ಸಿಕ್ಕ ಇಂಥ ಸ್ವಾಗತದಿಂದ ಕಣ್ಣೀರಾದ ವೈದ್ಯೆ ಹಾಗೂ ಆಕೆಯನ್ನು ಕುಟುಂಬಸ್ಥರು ಬರಮಾಡಿಕೊಂಡ ರೀತಿಯನ್ನು ದೀಪಕ್​ ಮಲ್ಹೋತ್ರಾ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಪ್ರಧಾನಿ ನರೇಂದ್ರ ಮೋದಿ ಅವರು, ಈ ಭಾವುಕ ಕ್ಷಣಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿ, ತಮ್ಮ ಟ್ವಿಟರ್​ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

"ಇಂಥ ಕ್ಷಣವನ್ನು ನೋಡಿ ನನ್ನ ಹೃದಯ ತುಂಬಿ ಬಂತು. ಇದು ಭಾರತದ ಹೆಮ್ಮೆ. ನಾವು ಕರೊನಾವನ್ನು ಧೈರ್ಯದಿಂದ ಎದುರಿಸುತ್ತಿರುವುದಕ್ಕೆ ಇದು ಉದಾಹರಣೆ. ಇಂಥ ವೈದ್ಯೆಯರ ಬಗ್ಗೆ ನಿಜಕ್ಕೂ ನಾವು ಹೆಮ್ಮೆ ಪಡಬೇಕಾದದ್ದೇ' ಎಂದಿದ್ದಾರೆ.

ಈ ಭಾವುಕ ಕ್ಷಣದ ವೀಡಿಯೋ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net