ಚೀನಾಕ್ಕೆ ವರವಾದ ಕರೊನಾ!; ಐಎಂಎಫ್ ವರದಿ

Coronavirus
Published on

ನವದೆಹಲಿ: ಕರೊನಾ ವೈರಸ್ ಪಸರಿಸುವಿಕೆ ಹಾಗೂ ಇದರ ನಿಯಂತ್ರಣಕ್ಕೆ ವಿಧಿಸಲಾಗಿದ್ದ ಲಾಕ್​ಡೌನ್ ಹಿನ್ನೆಲೆಯಲ್ಲಿ ಅಮೆರಿಕ ಸಹಿತ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರಿ ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೆ, ಕರೊನಾ ಉಗಮ ರಾಷ್ಟ್ರ ಚೀನಾ ಮಾತ್ರ ಆರ್ಥಿಕ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀಡಿರುವ ಅಂಕಿ-ಅಂಶದಿಂದ ಈ ವಿಚಾರ ಬೆಳಕಿಗೆ ಬಂದಿದೆ.

2021ರ ಜಾಗತಿಕ ಪ್ರಗತಿಯಲ್ಲಿ ಚೀನಾ ಮೊದಲ ಸ್ಥಾನ, ಅಮೆರಿಕ ಎರಡನೇ ಸ್ಥಾನದಲ್ಲಿ ಇರಲಿದೆ. 2021ರಲ್ಲಿ ಚೀನಾದ ಪಾಲು ಶೇ. 26.8 ಮತ್ತು 2025ಕ್ಕೆ ಶೇ. 27.7ಕ್ಕೆ ಏರುವ ಸಾಧ್ಯತೆ ಇದೆ. ಇದು ಅಮೆರಿಕದ ಪಾಲಿಗಿಂತ ಶೇ. 15ರಿಂದ 17 ಹೆಚ್ಚು. ಈ ಪಟ್ಟಿಯಲ್ಲಿ ಭಾರತ, ಜರ್ಮನಿ ಮತ್ತು ಇಂಡೋನೇಷ್ಯಾ ನಂತರದ ಸ್ಥಾನದಲ್ಲಿ ಇರಲಿವೆ ಎಂದು ವಿಶ್ವದ ಆರ್ಥಿಕ ಮುನ್ನೋಟದ ವರದಿಯಲ್ಲಿ ಐಎಂಎಫ್ ತಿಳಿಸಿದೆ. ಕರೊನಾ ಹೊಡೆತದಿಂದ ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ದರ (ಜಿಡಿಪಿ) ಈ ವರ್ಷ ಶೇ. 4.4ಕ್ಕೆ ಇಳಿಕೆಯಾಗುವ ಸಂಭವ ಇದೆ. ಮುಂದಿನ ವರ್ಷ ಶೇ. 5.2ಕ್ಕೆ ಏರಿಕೆ ಕಾಣಲಿದೆ. 2021ರಲ್ಲಿ ಚೀನಾದ ಜಿಡಿಪಿ ಶೇ. 8.2 ಇರಲಿದ್ದು, ಇದು ಒಟ್ಟಾರೆ ಜಾಗತಿಕ ಪ್ರಗತಿಯಲ್ಲಿ ಕಾಲು ಭಾಗ ಇರಲಿದೆ. ಅಮೆರಿಕದ ಜಿಡಿಪಿ ಶೇ. 3.1ರಷ್ಟು ದಾಖಲಾಗುವ ಅಂದಾಜು ಇದ್ದು, ಜಾಗತಿಕ ಲೆಕ್ಕದಲ್ಲಿ ಶೇ. 11.6 ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಜಾಗತಿಕ ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಹಾದಿಯಲ್ಲಿದ್ದರೂ ಆರೋಹಣವು ಅಸಮಾನವಾಗಿ ಮತ್ತು ಅನಿಶ್ಚಿತವಾಗಿ ಇರುವ ಸಾಧ್ಯತೆ ಇದೆ. ಕರೊನಾ ಕಾರಣ ಬಡವರು ಮತ್ತಷ್ಟು ಬಡವರಾಗಲಿದ್ದು, ಜಾಗತಿಕವಾಗಿ 9 ಕೋಟಿ ಜನರು ಕಡುಬಡತನಕ್ಕೆ ದೂಡಲ್ಪಡುತ್ತಾರೆ’ ಎಂದು ಐಎಂಎಫ್​ನ ಸಂಶೋಧನಾ ವಿಭಾಗದ ನಿರ್ದೇಶಕಿಯಾದ ಭಾರತ ಮೂಲಕದ ಗೀತಾ ಗೋಪಿನಾಥ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

17 ದೇಶಗಳಿಗೆ ಪ್ರಯಾಣ

ಕರೊನಾದಿಂದಾಗಿ ವಿಮಾನ ಸಂಚಾರ ರದ್ದಾಗಿರುವ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಜತೆ ಒಪ್ಪಂದದ ಮೇರೆಗೆ ವಿಮಾನ ಸಂಚಾರ ಆರಂಭಿಸಲಾಗುತ್ತಿದೆ. ಉಕ್ರೇನ್ ಸೇರಿ ಒಟ್ಟು 17 ದೇಶಗಳು ಭಾರತದೊಂದಿಗೆ ಏರ್ ಬಬಲ್ ನಿರ್ವಿುಸಿಕೊಂಡಿದ್ದು, ಈ ದೇಶಗಳಿಗೆ ಭಾರತೀಯರು ಸಂಚಾರ ನಡೆಸುವುದಕ್ಕೆ ಅನುವು ಮಾಡಿಕೊಡಲಾಗಿದೆ. ಉಕ್ರೇನ್, ಅಫ್ಘಾನಿಸ್ತಾನ, ಬಹ್ರೇನ್, ಓಮನ್, ಕೆನಡಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಮಾಲ್ಡೀವ್ಸ್, ನೈಜೀರಿಯಾ, ಕತಾರ್, ಅರಬ್ ಸಂಯುಕ್ತ ಸಂಸ್ಥಾನ, ಕೀನ್ಯಾ, ಭೂತಾನ್, ಬ್ರಿಟನ್, ಅಮೆರಿಕಕ್ಕೆ ಭಾರತೀಯರು ಪ್ರಯಾಣ ಮಾಡಬಹುದು.

ಒ ರಕ್ತದ ಗುಂಪಿನವರು ಹೆಚ್ಚು ಸೇಫ್

ಒ ರಕ್ತದ ಗುಂಪು ಹೊಂದಿರುವವರಿಗೆ ಕರೊನಾ ಸೋಂಕಿನ ಸಮಸ್ಯೆ ಕಡಿಮೆ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ವಿಜ್ಞಾನಿಗಳು 4.73 ಲಕ್ಷ ಸೋಂಕಿತರ ರಕ್ತದ ಮಾದರಿಯ ಅಧ್ಯಯನ ನಡೆಸಿದ್ದಾರೆ. ಒ ರಕ್ತದ ಗುಂಪನ್ನು ಹೊಂದಿರುವವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಈ ರಕ್ತದ ಗುಂಪಿನವರು ಸೋಂಕಿಗೆ ತುತ್ತಾದರೂ ಅವರಲ್ಲಿ ಹೆಚ್ಚಿನ ಲಕ್ಷಣ ಕಾಣಿಸಿಕೊಳ್ಳುವುದಿಲ್ಲ. ಐಸಿಯು ಅವಶ್ಯಕತೆ ಬೀಳುವುದು ತೀರಾ ಕಡಿಮೆ ಎಂದು ವರದಿ ತಿಳಿಸಿದೆ. ಎ ಮತ್ತು ಎಬಿ ರಕ್ತದ ಗುಂಪಿನವರಿಗೆ ಕರೊನಾ ಹೆಚ್ಚಿನ ಸಮಸ್ಯೆಯಾಗಿ ಕಾಡುತ್ತದೆ. ಐಸಿಯು ಸೇರಿರುವವರಲ್ಲಿ ಬಹುತೇಕರು ಈ ರಕ್ತದ ಗುಂಪಿಗೆ ಸೇರಿದವರು. ಕರೊನಾದಿಂದ ಗುಣಮುಖರಾದ ನಂತರವೂ ಈ ರಕ್ತದ ಗುಂಪಿನವರಿಗೆ ಕೆಲವು ಸಮಸ್ಯೆಗಳು ಶಾಶ್ವತವಾಗಿ ಉಳಿಯುತ್ತದೆ ಎನ್ನಲಾಗಿದೆ. ಸ್ಪೇನ್​ನಲ್ಲಿ 1,900 ಸೋಂಕಿತರ ರಕ್ತದ ಗುಂಪಿನ ಅಧ್ಯಯನ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net