

ನವದೆಹಲಿ: ಆಂಧ್ರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕರೊನಾ ಕೇಸುಗಳು ಜಾಸ್ತಿಯಾಗುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 62 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 955ಕ್ಕೆ ತಲುಪಿದೆ. 145 ಮಂದಿ ಕೋವಿಡ್ -19ರಿಂದ ಗುಣಮುಖರಾಗಿದ್ದರೆ, 29 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರೊನಾ ಟೆಸ್ಟ್ಗಳನ್ನು ಹೆಚ್ಚಿಸಲಾಗಿದ್ದು, ಅಧಿಕೃತ ಮಾಹಿತಿ ಪ್ರಕಾರ ಈವರೆಗೆ 54,341 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರಪ್ರದೇಶ ಅತಿ ವೇಗದಲ್ಲಿ ಪರೀಕ್ಷೆಗಳನ್ನು ನಡೆಸಿದೆ.
ರಾಜ್ಯದ ಕರ್ನಲು, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಅತ್ಯಧಿಕ (425) ಕೇಸುಗಳು ದಾಖಲಾಗಿದ್ದು, ಶೇ.50ಕ್ಕಿಂತಲೂ ಹೆಚ್ಚು ಸೋಂಕಿತರು ಈ ಮೂರು ಜಿಲ್ಲೆಗಳಲ್ಲೇ ಇದ್ದಾರೆ. ಉಳಿದ 8 ಜಿಲ್ಲೆಗಳಲ್ಲಿ 332 ಕೇಸುಗಳಿದ್ದು, ವಿಜಯನಗರ ಹಾಗೂ ಶ್ರೀಕಾಕುಳಂ ವೈರಸ್ವುುಕ್ತ ಜಿಲ್ಲೆಗಳಗಾಗಿವೆ. ಅತ್ಯಧಿಕ ಸೋಂಕಿತರಿರುವ ಮೂರು ಜಿಲ್ಲೆಗಳಲ್ಲಿ ದೆಹಲಿ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇಟಲಿಯಿಂದ ನೆಲ್ಲೋರ್ಗೆ ಬಂದಿದ್ದ 24 ವರ್ಷದ ಯುವಕನಿಗೆ ಮಾರ್ಚ್ 12ರಂದು ಕರೊನಾ ಸೋಂಕು ದೃಢವಾಗುವ ಮೂಲಕ ರಾಜ್ಯದಲ್ಲಿ ಮೊದಲ ಕೇಸು ಬೆಳಕಿಗೆ ಬಂದಿತ್ತು.
40 ಮಕ್ಕಳಲ್ಲಿ ಸೋಂಕು: ಜಮಾತ್ ಸಭೆಯಲ್ಲಿ ಪಾಲ್ಗೊಂಡ ಪರಿಣಾಮ 3ರಿಂದ 17 ವರ್ಷದ ಸುಮಾರು 45ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಈ ಮಕ್ಕಳ ಕುಟುಂಬದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯಲ್ಲಿ ಸೋಂಕಿರುವುದು ದೃಢವಾಗಿದೆ. ಇದಲ್ಲದೆ ತಬ್ಲಿಘಿ ಸಭೆ ನಂಟಿದ್ದವರಿಂದ ಸುಮಾರು 130ಕ್ಕಿಂತಲೂ ಹೆಚ್ಚು ಮಹಿಳೆಯರಿಗೂ ಸೋಂಕು ಹರಡಿದೆ. ಜಮಾತ್ ಸಭೆ ನಂಟಿದ್ದವರಿಂದ 60 ವರ್ಷಕ್ಕಿಂತಲೂ ಹೆಚ್ಚು ವಯಸ್ಸಿನ 40 ಮಂದಿಗೆ ಸೋಂಕು ಹಬ್ಬಿದೆ. ಸಭೆ ಮುಗಿದು ಆಂಧ್ರಕ್ಕೆ ವಾಪಸಾದ ಬಳಿಕ ತಮ್ಮ ಕುಟುಂಬಸ್ಥರನ್ನು ಸಂರ್ಪಸಿದ್ದರಿಂದ ಇವರೆಲ್ಲರಿಗೂ ಕರೊನಾ ಅಂಟಿಕೊಂಡಿದೆ ಎಂದು ಸರ್ಕಾರ ಹೇಳಿದೆ.
ಪರೀಕ್ಷೆ ಮಾಡಿಸಿಕೊಂಡಿದ್ದ ಸಿಎಂ ಜಗನ್: ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಯಾರೂ ಹಿಂಜರಿಯಬಾರದು ಎಂಬ ಸಂದೇಶ ರವಾನಿಸುವ ಉದ್ದೇಶದಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಅವರೇ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ದಕ್ಷಿಣ ಕೊರಿಯಾದಿಂದ ತರಿಸಿಕೊಂಡಿದ್ದ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ ಮುಖೇನ ಅವರಿಗೆ ಪರೀಕ್ಷೆ ನಡೆಸಲಾಗಿತ್ತು ಮತ್ತು ನೆಗೆಟಿವ್ ಎಂದು ವರದಿ ಬಂದಿತ್ತು.
ತೆಲಂಗಾಣ: ಮಹಾಮಾರಿ ಕರೊನಾ ವೈರಸ್ ಹರಡುವಿಕೆ ತಡೆಗೆ ಲಾಕ್ಡೌನ್ ಪರಿಣಾಮಕಾರಿ ಅಸ್ತ್ರ ಎಂದು ನಂಬಿರುವ ಸಿಎಂ ಚಂದ್ರಶೇಖರ ರಾವ್, ಮೇ 7ರ ತನಕ ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ದೇಶಾದ್ಯಂತ ಮೇ 3ರ ತನಕ ಲಾಕ್ ಡೌನ್ ಮುಂದುವರಿಯಲಿದೆ ಎಂದು ಘೊಷಿಸಿತ್ತು. ಆದರೆ ಕೆಸಿಆರ್ ಕೇಂದ್ರಕ್ಕಿಂತ ಒಂದು ಹೆಜ್ಜೆ ಮುಂದಿದ್ದಾರೆ. ಈ ನಡುವೆ ಕಳೆದ 34 ಗಂಟೆಗಳಲ್ಲಿ ಇಲ್ಲಿ 24 ಹೊಸ ಕರೊನಾ ಕೇಸುಗಳು ಪತ್ತೆಯಾಗಿವೆ. ಬುಧವಾರ ಕೇವಲ 15 ಕೇಸುಗಳು ಪತ್ತೆಯಾಗಿದ್ದರಿಂದ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸಿಎಂ ಹೇಳಿದ್ದರು. ಆದರೆ, ಶುಕ್ರವಾರ ಮತ್ತೆ ಸಂಖ್ಯೆ ಹೆಚ್ಚಾಗಿರುವುದು ಸಹಜವಾಗಿಯೇ ಸರ್ಕಾರವನ್ನು ಚಿಂತೆಗೆ ದೂಡಿದೆ. ಈವರೆಗೆ ತೆಲಂಗಾಣದಲ್ಲಿ 970 ಮಂದಿಗೆ ಕರೊನಾ ಸೋಂಕಿರುವುದು ದೃಢವಾಗಿದೆ. ಹೈದರಾಬಾದ್ನಲ್ಲೇ (570) ಅತಿ ಹೆಚ್ಚು ಕೇಸುಗಳು ಬೆಳಕಿಗೆ ಬಂದಿವೆ. 252 ಮಂದಿ ರೋಗದಿಂದ ಗುಣಮುಖರಾಗಿದ್ದರೆ, 25 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 9 ಕರೊನಾ ಪ್ರಯೋಗಾಲಯಗಳಿದ್ದು, ದಿನಕ್ಕೆ 1540 ಟೆಸ್ಟ್ಗಳನ್ನು ನಡೆಸಲಾಗುತ್ತಿದೆ. ಹೈದರಾಬಾದ್ನಲ್ಲಿ ಕರೊನಾ ಕೇಸುಗಳು ಹೆಚ್ಚಾಗಲು ದೆಹಲಿಯಲ್ಲಿ ನಡೆದಿದ್ದ ಜಮಾತ್ ಸಭೆಯೇ ಮುಖ್ಯ ಕಾರಣ ಎಂದು ರಾಜ್ಯ ಸರ್ಕಾರವೇ ಹೇಳಿದೆ.
ನೆರವಾದ ಪೊಲೀಸ್: ಲಾಕ್ಡೌನ್ನಿಂದಾಗಿ ಹೈದರಾಬಾದ್ನ ಕುಕಟ್ ಪಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಿಮಾಚಲ ಪ್ರದೇಶದ 30 ವರ್ಷದ ಯುವಕನ ಜೀವ ಕಾಪಾಡಿದ ಪೊಲೀಸ್ ಅಧಿಕಾರಿ ಲಕ್ಷ್ಮಿನಾರಾಯಣ ರೆಡ್ಡಿ ಅವರಿಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಹಿಮಾಚಲದ ಲಲಿತ್ ಕುಮಾರ್ ಅನೇಕ ದಿನಗಳಿಂದ ಅಪೆಂಡಿಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದ. ಆದರೆ, ಚಿಕಿತ್ಸೆಗೆ ಆತನಲ್ಲಿ ದುಡ್ಡಿರಲಿಲ್ಲ. ಇದನ್ನರಿತ ಪೊಲೀಸ್ ಅಧಿಕಾರಿ ರೆಡ್ಡಿ, ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಲ್ಲದೆ, ಒಟ್ಟು ಚಿಕಿತ್ಸಾ ವೆಚ್ಚ 20000 ರೂ.ಗಳನ್ನು ತಾವೇ ನೀಡುವುದಾಗಿ ವೈದ್ಯರಿಗೆ ತಿಳಿಸಿದರು. ಹಿಮಾಚಲ ಪ್ರದೇಶ ರಾಜ್ಯಪಾಲರಾಗಿರುವ ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರಿಗೂ ಈ ಘಟನೆ ಬಗ್ಗೆ ಮಾಹಿತಿ ತಿಳಿದು, ಅದನ್ನವರು ಹಿಮಾಚಲ ಸಿಎಂ ಜೈರಾಂ ಠಾಕೂರ್ಗೂ ರವಾನಿಸಿದ್ದರು. ಲಲಿತ್ ಕುಮಾರ್ಗೆ ಸಕಾಲದಲ್ಲಿ ಹಣ ನೀಡಿ ಪ್ರಾಣ ಉಳಿಸಿದ್ದಕ್ಕಾಗಿ ಆತನ ಕುಟುಂಬವೂ ಕೃತಜ್ಞತೆ ವ್ಯಕ್ತಪಡಿಸಿದೆ. ಎಲ್ಲಕ್ಕಿಂತ ಮೇಲಾಗಿ, ಸಿಎಂ ಜೈರಾಂ ಠಾಕೂರ್ ಅವರೂ ರೆಡ್ಡಿ ಅವರಿಗೆ ಧನ್ಯವಾದ ಸಂದೇಶ ಕಳಿಸಿಕೊಟ್ಟಿದ್ದಾರೆ. ಕೋವಿಡ್-19 ಸೃಷ್ಟಿಸಿರುವ ಆರೋಗ್ಯ ಎಮರ್ಜೆನ್ಸಿ ಸಂದರ್ಭದಲ್ಲಿ ಬಡವರ ನೆರವಿಗೆ ಧಾವಿಸಿದ ಈ ಪೊಲೀಸ್ ಅಧಿಕಾರಿಯ ಕೆಲಸ ಮಾದರಿ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ.