

ಪಿರಿಯಾಪಟ್ಟಣ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ಮನೆಗೆ ಮಾಹಿತಿ ಪತ್ರ ವಿತರಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ ತಿಳಿಸಿದರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನರು ಪರಸ್ಪರ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್.ಪ್ರದೀಪ್ ಮಾತನಾಡಿ, ಲಾಕ್‌ಡೌನ್ ಸಡಿಲಿಕೆ ಇದೆ ಎಂದು ಸಾರ್ವಜನಿಕರು ಅನಗತ್ಯವಾಗಿ ಓಡಾಡದೆ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್, ಯೋಜನಾಧಿಕಾರಿಗಳಾದ ಸುರೇಶ್‌ಶೆಟ್ಟಿ, ಪ್ರಕಾಶ್ ನಾಯಕ್, ಜಯಂತಿ, ಸದಾಶಿವ್, ಎಂಐಎಸ್ ಯೋಜನಾಧಿಕಾರಿ ಸುಕ್ರುಗೌಡ, ಪುರಸಭೆ ಆರೋಗ್ಯಾಧಿಕಾರಿ ಆದರ್ಶ್ ಹಾಜರಿದ್ದರು.