ಈರುಳ್ಳಿ ವ್ಯಾಪಾರಕ್ಕೆ ಹೋದವ ಜತೆಯಲ್ಲೇ ಕರೊನಾ ಕರೆತಂದ!

Seasonal corona
Published on

ಚಾಮರಾಜನಗರ: ದೇಶದಲ್ಲಿ ಕರೊನಾ ಹಾಟ್​ಸ್ಪಾಟ್ ಆಗಿರುವ ರಾಜ್ಯ ತಮಿಳುನಾಡಿನ ಸೇಲಂಗೆ ಈರುಳ್ಳಿ ಮಾರಲು ಹೋಗಿಬಂದ ವ್ಯಕ್ತಿಗೂ ಕರೊನಾ ಸೋಂಕು ತಗುಲಿದ್ದು, ಈತನ ಟ್ರಾವೆಲ್​ ಹಿಸ್ಟರಿ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ವಾರದಲ್ಲಿ ಮೂರು ಬಾರಿ ಸೇಲಂಗೆ ಹೋಗಿ ಬಂದ ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ನಗರದ 39 ವರ್ಷದ ವ್ಯಕ್ತಿಗೆ ಕರೊನಾ ವೈರಸ್ ತಗುಲಿದೆ. ಈತ ಜೂ. 16ರಂದು ಸೆಲಂಗೆ ಹೋಗಿ ಬಂದಿದ್ದ. ಜೂ.18ರಂದು ಗಂಟಲು ನೋವು, ಶೀತ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೇಳೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಜೂ.19ರಂದು ಪಾಸಿಟಿವ್​ ಬಂದಿದೆ. ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

ಸೋಂಕಿತನು ಪಟ್ಟಣದ ಅಂಗಡಿಯೊಂದರಲ್ಲಿ ಟೀ ಕುಡಿಯಲು ಹೋಗಿದ್ದ. ಅನಾರೋಗ್ಯದ ನಿಮಿತ್ತ ತಾಲೂಕು ಆಸ್ಪತ್ರೆಗೆ ತೆರಳುವ ಮುನ್ನ ಇಲ್ಲಿನ ಖಾಸಗಿ ಆಸ್ಪತ್ರೆಗೂ ಹೋಗಿದ್ದ. ಈತನನ್ನು ತಪಾಸಣೆ ಮಾಡಿದ್ದ ವೈದ್ಯರನ್ನು ಕ್ವಾರಂಟೈನ್​ಗೆ ಒಳಪಡಿಸಲು ತೀರ್ಮಾಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಮಹದೇವಪ್ರಸಾದ್ ಬಡಾವಣೆಯ ಬೀದಿಯನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ. ಸೋಂಕಿತ ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿ 100 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಮಾಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರನ್ನು(ಸೋಂಕಿತನ ಪತ್ನಿ, ತಾಯಿ, ಮೂವರು ಮಕ್ಕಳು, ತಮ್ಮ-ತಮ್ಮನ ಹೆಂಡತಿ, ಮೂವರು ಮಕ್ಕಳು) ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಎಸ್ಪಿ ಆನಂದ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net