ಸೋನಿಯಾ ಮನೆಯಿಂದ ಕೊರೊನಾ!

Parliment vvani
Published on

ನವದೆಹಲಿ: ಕೊರೊನಾ ವೈರಸ್ ಕುರಿತಂತೆ ಎನ್​ಡಿಎ ಅಂಗಪಕ್ಷದ ಸದಸ್ಯರೊಬ್ಬರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ಬಗ್ಗೆ ಮಾಡಿದ ಆಕ್ಷೇಪಾರ್ಹ ಹೇಳಿಕೆಯು ಲೋಕಸಭೆಯ ಕಲಾಪಕ್ಕೆ ಭಂಗ ಉಂಟು ಮಾಡಿತು.

ಮಾರಕಕೊರೊನಾ ಸೋಂಕಿನ ಬಗ್ಗೆ ಲೋಕಸಭೆಯಲ್ಲಿ ಗುರುವಾರ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಆರ್​ಎಲ್​ಪಿಯ ಸಂಸದ ಹನುಮಾನ್ ಬೆನಿವಾಲ್, ಈ ಸೋಂಕು ಸೋನಿಯಾರ ಮನೆಯಿಂದ ಹಬ್ಬಿದೆ ಎಂದು ಆರೋಪಿಸಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸಂಸದರು ಸ್ಪೀಕರ್ ಮುಂದಿನ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿದರು. ಗದ್ದಲ ತೀವ್ರವಾದ ಕಾರಣ ಸದನವನ್ನು ಒಂದು ತಾಸು ಮುಂದೂಡಲಾಯಿತು.

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಹರ್ಷವರ್ಧನ್ ಸಂಸತ್​ಗೆ ಮಾಹಿತಿ ನೀಡಿದರು. ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಖುದ್ದಾಗಿ ಪರಿಶೀಲಿಸುತ್ತಿದ್ದಾರೆ. ಮಾ.4ರವರೆಗೆ 28,529 ಜನರ ಮೇಲೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ನಿಗಾವಹಿಸಲಾಗಿದೆ. ಇರಾನ್​ನಲ್ಲಿ ಸಿಲುಕಿರುವ ಭಾರತೀಯರಿಗೆ ಸೂಕ್ತ ಚಿಕಿತ್ಸೆ ಹಾಗೂ ರಕ್ಷಣೆ ಸಂಬಂಧ ಅಲ್ಲಿನ ಅಧಿಕಾರಿಗಳ ಜತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ದೇಶದಲ್ಲಿ ಒಟ್ಟು 30 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಭಾರತೀಯಳಿಗೆ ಸೋಂಕು

ದುಬೈನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಯುಎಇನಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ವಿಶ್ವದೆಲ್ಲೆಡೆ ಸೋಂಕು ಹರಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಚೀನಾದಲ್ಲಿನ ನಗರಗಳ ಸ್ತಬ್ಧ ಸ್ಥಿತಿ ಇನ್ನೂ ಕೆಲ ಕಾಲ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಚೀನಾ ಸೇರಿದಂತೆ ವಿಶ್ವದ 75 ರಾಷ್ಟ್ರಗಳಲ್ಲಿ ಈವರೆಗೆ 3,308 ಜನರು ಸಾವನ್ನಪ್ಪಿದ್ದು, ಒಟ್ಟು 96,782 ಜನರಲ್ಲಿ ಸೋಂಕು ದೃಢಪಟ್ಟಿದೆ.

ದಕ್ಷಿಣ ಕೊರಿಯಾದಲ್ಲಿಕೊರೊನಾ ಸೋಂಕಿತರ ಸಂಖ್ಯೆ 6 ಸಾವಿರ ದಾಟಿದ್ದು, ಈವರೆಗೆ 35 ಜನರು ಸಾವನ್ನಪ್ಪಿದ್ದಾರೆ. ಸ್ವಿಜರ್ಲೆಂಡ್ಂಡ್​ನಲ್ಲಿ 74 ವರ್ಷದ ಮಹಿಳೆಯೊಬ್ಬರು ಕರೊನಾದಿಂದಾಗಿ ಸಾವನ್ನಪ್ಪಿದ್ದು, ಇದು ಅಲ್ಲಿನ ಮೊದಲ ಪ್ರಕರಣವಾಗಿದೆ. ಇರಾನ್​ನಲ್ಲಿ ಮತ್ತೆ 15 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 107ಕ್ಕೆ ಏರಿಕೆ.

ಇಟಲಿ, ದಕ್ಷಿಣ ಕೊರಿಯಾ ಪ್ರಜೆಗಳು ಕರೊನಾ ಸೋಂಕು ಇಲ್ಲವೆಂಬ ವೈದ್ಯಕೀಯ ಪ್ರಮಾಣಪತ್ರ ತೋರಿಸಿದರೆ ಮಾತ್ರ ಭಾರತಕ್ಕೆ ಪ್ರವೇಶವೆಂದು ಎಂದು ಸರ್ಕಾರ ತಿಳಿಸಿದೆ.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಲ್ಜಿಯಂ ಪ್ರವಾಸ ರದ್ದುಗೊಳಿಸಿದ್ದಾರೆ. ಮುಂದಿನ ವಾರ ಈ ಪ್ರವಾಸ ನಿಗದಿಯಾಗಿತ್ತು. ಅಮೆರಿಕದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ 16,076 ಮಂದಿ ಇರುವ ಚೀನಾದ ಹಡಗೊಂದಕ್ಕೆ ತನ್ನ ಬಂದರಿನಲ್ಲಿ ಲಂಗರು ಹಾಕಲು ಭಾರತ ಅವಕಾಶ ನಿರಾಕರಿಸಿದೆ. ಆದಾಗ್ಯೂ ಹಡಿಗಿನಲ್ಲಿರುವವರಿಗೆ ಸಾಧ್ಯವಾದ ಮಟ್ಟಿಗೆ ಎಲ್ಲ ಸಹಾಯ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net