

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಕರಿನೆರಳಿನಲ್ಲೇ ಬದುಕುತ್ತ ಇದೀಗ 3ನೇ ಅಲೆಯ ಆತಂಕಕ್ಕೆ ಸಿಲುಕಿದ್ದ ರಾಜ್ಯದ ಜನತೆಗೆ ಕೊಂಚ ನಿರಾಳ ಮೂಡಿಸುವ ಸುದ್ದಿ ಹೊರಬಿದ್ದಿದೆ. ಕರೊನಾದ ಹೊಸ ರೂಪಾಂತರಿ ತಳಿಗಳು ಪತ್ತೆಯಾಗದ ಕಾರಣ ಕೋವಿಡ್ 3ನೇ ಅಲೆ ಬಂದರೂ ಅಷ್ಟೊಂದು ತೀವ್ರತೆ ಇರುವುದಿಲ್ಲ ಎಂದು ತಜ್ಞರು ಧೈರ್ಯ ತುಂಬಿದ್ದಾರೆ. ಕೋವಿಡ್ ಪ್ರಕರಣ ತಗ್ಗಿ ದೇವಾಲಯ, ಶಾಲೆ, ಮಾಲ್, ಚಿತ್ರಮಂದಿರಗಳೆಲ್ಲ ತೆರೆದು ಪ್ರವಾಸೋದ್ಯಮ, ಉತ್ಸವದಂತಹ ಎಲ್ಲ ಚಟುವಟಿಕೆಗಳು ಗರಿಗೆದರಿರುವ ಸಂದರ್ಭದಲ್ಲಿ ತಜ್ಞರ ಈ ವರದಿ ಬದುಕಿಗೆ ಹೊಸ ಆಕ್ಸಿಜನ್ ನೀಡಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ತೀವ್ರತೆ, ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಆಧರಿಸಿ ಈ ಹಿಂದೆ ತಜ್ಞರು ಹಾಗೂ ವೈದ್ಯರು ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಅಕ್ಟೋಬರ್ ಮಧ್ಯಭಾಗದವರೆಗೆ ನಡೆಸಲಾದ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮತ್ತು ಇತರ ಅಧ್ಯಯನಗಳಲ್ಲಿ ಕರೊನಾ ವೈರಸ್ ಹೊಸ ರೂಪಾಂತರಿಗಳು ಕಾಣಿಸಿಕೊಂಡಿಲ್ಲ. ಇದಲ್ಲದೆ ಸೋಂಕು ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿಲ್ಲ. ಹಾಗಾಗಿ ಮೂರನೇ ಅಲೆ ಬಂದರೂ ಪ್ರಕರಣಗಳ ಸಂಖ್ಯೆ ಕಡಿಮೆ ಇರಲಿದ್ದು, ಸೋಂಕಿನ ತೀವ್ರತೆ ಹೆಚ್ಚಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ವೈರಸ್ ವಂಶಾವಳಿ ಕ್ಷೀಣ: ಕರೊನಾ ವೈರಸ್ನ ರೂಪಾಂತರಿ ಡೆಲ್ಟಾ ವಂಶಾವಳಿಗೆ ಸೀಮಿತವಾಗಿದ್ದು, ಅವೂ ಕ್ಷೀಣಿಸುತ್ತಿರುವುದಾಗಿ ಅಧ್ಯಯನಗಳಿಂದ ತಿಳಿದು ಬಂದಿದೆ. ಕೋವಿಡ್ ವಿರುದ್ಧ ನೀಡಲಾದ ಲಸಿಕೆಯಿಂದಾಗಿ ಕೋವಿಡ್ ತೀವ್ರತೆ ತಗ್ಗುವುದರ ಜತೆಗೆ ಹೊಸ ರೂಪಾಂತರಿಗಳ ಉಗಮಕ್ಕೆ ತಡೆ ನೀಡಿದಂತಾಗಿದೆ. ದಕ್ಷಿಣ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾಕ್ಕೆ ಸೀಮಿತವಾದ ಹೊಸ ರೂಪಾಂತರಿಗಳು ಭಾರತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಹಾಗೇನಾದರೂ ಹೊಸ ರೂಪಾಂತರವಿದ್ದರೂ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ನಂತೆ ತೀವ್ರವಾಗುವ ಸಾಧ್ಯತೆಯಿಲ್ಲ. ಇದು ಕೋವಿಡ್ ಲಸಿಕೆ ಒದಗಿಸಿರುವ ರಕ್ಷಣೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ವೈರಾಣು ತಜ್ಞ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ. ವಿ. ರವಿ.
ಲಸಿಕೆ ಶೇ.100 ಪೂರ್ಣಗೊಳ್ಳಬೇಕು: ರಾಜ್ಯದಲ್ಲಿ ಈಗಾಗಲೇ ಶೇ. 80ಕ್ಕೂ ಅಧಿಕ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು, ಶೇ. 30ಕ್ಕಿಂ ಹೆಚ್ಚು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್ ಲಸಿಕೆ ಶೇ. 100 ಪೂರ್ಣಗೊಳ್ಳುವವರೆಗೆ ಹಾಗೂ ಕೋವಿಡ್ ಸಾಂಕ್ರಾಮಿಕ ಸಂಪೂರ್ಣ ಹತೋಟಿಗೆ ಬರುವವರೆಗೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಲಸಿಕೆ ಕೊರತೆ ಇಲ್ಲ: ಕೋವಿಡ್ ಲಸಿಕೆ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜ್ಯವು 50 ಲಕ್ಷ ಡೋಸ್ ಲಸಿಕೆ ದಾಸ್ತಾನು ಹೊಂದಿದ್ದು, ಫೆಬ್ರವರಿ ವೇಳೆಗೆ ಎರಡನೇ ಡೋಸ್ ಶೇ. 100 ಸಾಧನೆಯ ನಿರೀಕ್ಷೆ ಹೊಂದಲಾಗಿದೆ. 2ನೇ ಅಲೆ ಕೊನೆಗೊಂಡಂತೆ ಕಾಣುತ್ತಿದ್ದು, ಪೂರ್ಣಪ್ರಮಾಣದಲ್ಲಿ ಲಸಿಕೆ ವಿತರಣೆ ಗುರಿ ತಲುಪುವವರೆಗೂ ಹಾಗೂ ಮೂರನೇ ಅಲೆ ತಪ್ಪಿಸಲು ಎಲ್ಲರೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ದೃಢಪಟ್ಟ ಸೋಂಕು ಪ್ರಕರಣಗಳಲ್ಲಿ ಶೇ. 10 ಮಾದರಿಗಳನ್ನು ನಿತ್ಯ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ರೂಪಾಂತರಿ ಪತ್ತೆಯಾಗಿಲ್ಲ. ಒಂದೇ ಪ್ರದೇಶದಲ್ಲಿ ಹೆಚ್ಚು ಪ್ರಕರಣ ವರದಿಯಾಗಿಲ್ಲ. ಆದರೂ ಇಲಾಖೆ ಎಲ್ಲ ಎಚ್ಚರಿಕೆ ಕ್ರಮ ಪಾಲಿಸುತ್ತಿದೆ. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು.
| ಡಿ. ರಂದೀಪ್ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಮೈಮರೆಯುವಂತಿಲ್ಲ: ಕೋವಿಡ್ ಮೂರನೇ ಅಲೆ ಬಂದರೂ ಅಪಾಯಕಾರಿಯಲ್ಲ ಎಂದಾಕ್ಷಣ ಅದು ಬರುವುದೇ ಇಲ್ಲ ಎಂದರ್ಥವಲ್ಲ. ಜನರು ಮೊದಲ ಅಲೆಯ ನಂತರ ಮಾಡಿದ ತಪ್ಪನ್ನು ಮರುಕಳಿಸಿದರೆ ಮೂರನೇ ಅಲೆ ಯಾವಾಗ ಬೇಕಾದರೂ ಬರಬಹುದು. ಹಾಗಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳ ಸ್ವಚ್ಛತೆ ಸೇರಿದಂತೆ ಕೋವಿಡ್ ನಿಯಮಗಳನ್ನು ಮುಂದಿನ ಒಂದು ವರ್ಷ ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುತ್ತಾರೆ ತಜ್ಞರು.
ಶೇ. 80 ಪ್ರತಿಕಾಯ ವೃದ್ಧಿ: ಆಗಸ್ಟ್ನಲ್ಲಿ ನಡೆದ ಸಿರೋ ಸರ್ವೆಯಲ್ಲಿ ಬೆಂಗಳೂರಿನಲ್ಲಿ ಶೇ. 80, ಕರ್ನಾಟಕದಾದ್ಯಂತ ಶೇ. 65 ಜನರಲ್ಲಿ ಪ್ರತಿಕಾಯಗಳ ಅಭಿವೃದ್ಧಿ ಕಂಡುಬಂದಿದೆ. ಇದು ಶೇ. 80 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಅಥವಾ ಲಸಿಕೆ ಮೂಲಕ ಪ್ರತಿಕಾಯ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ 3ನೇ ಅಲೆ ನಿಯಂತ್ರಿಸಲು ಮಕ್ಕಳಿಗೆ ಶೀಘ್ರವೇ ಲಸಿಕೆ ಹಾಕಲು ಸರ್ಕಾರ ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕೇರಳ ಹೊರತುಪಡಿಸಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಜತೆಗೆ ಶೇ. 80ಕ್ಕೂ ಅಧಿಕ ಮಂದಿ ಮೊದಲ, ಶೇ.30ಕ್ಕೂ ಹೆಚ್ಚು ಮಂದಿ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಎಲ್ಲರಿಗೂ ಶೀಘ್ರ ಲಸಿಕೆ ಲಭ್ಯವಾದಲ್ಲಿ ಮೂರನೇ ಅಲೆ ಬರದೇ ಇರುವ ಸಾಧ್ಯತೆಗಳೂ ಇದೆ. ಕೋವಿಡ್ ಸಾಂಕ್ರಾಮಿಕ ಅಂತ್ಯ ಆಗಲೂಬಹುದು. ಆದರೆ ಜನರು ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
| ಡಾ. ಸಿ.ಎನ್. ಮಂಜುನಾಥ್ ಸದಸ್ಯರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ