ಖಾಸಗಿಯಿಂದ ಕರೊನಾ ಸುಲಿಗೆ: ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದ ಖಾಸಗಿ ಆಸ್ಪತ್ರೆಗಳು

Corona
Published on

ಬೆಂಗಳೂರು: ಕೋವಿಡ್ ಸೋಂಕಿತರಿಂದ ಅನಗತ್ಯವಾಗಿ ಹಾಗೂ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಣ ವಸೂಲಿ ಮಾಡುವುದನ್ನು ಮುಂದುವರಿಸಿವೆ. ಚಿಕಿತ್ಸೆ ನೆಪದಲ್ಲಿ ಮನಸೋ ಇಚ್ಛೆ ಹಣ ಸುಲಿಗೆ ಮಾಡುತ್ತಿವೆ.

ಸರ್ಕಾರ ಕೋವಿಡ್ ಚಿಕಿತ್ಸೆಗೆ ದರಪಟ್ಟಿ ನಿಗದಿಪಡಿಸಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಮನಬಂದಂತೆ ಬಿಲ್ ಮಾಡಲಾಗುತ್ತಿದೆ.ಅನಗತ್ಯವಾಗಿ ರೋಗಿಗಳಿಂದ ಸುಲಿಗೆ ಮಾಡಿರುವ ಕೆಲ ಆಸ್ಪತ್ರೆಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಂಡು ದಂಡ ವಿಧಿಸಲಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಕೆಲ ಆಸ್ಪತ್ರೆಗಳು, ರೋಗಿಗಳಿಂದ ಹಣ ಸುಲಿಗೆಯನ್ನು ಎಗ್ಗಿಲ್ಲದೆ ಮುಂದುವರಿಸಿವೆ.

ಬಸವೇಶ್ವರನಗರದ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಕರೊನಾ ರೋಗಿಯಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗಿದೆ. ಅವರ ಪತ್ನಿ ಹಾಗೂ ಮಗಳ ಚಿಕಿತ್ಸೆಗೂ ಹೆಚ್ಚುವರಿ ಹಣ ಪಡೆಯಲಾಗಿದೆ. ಆರೋಗ್ಯ ವಿಮೆ ಸೌಲಭ್ಯವಿದ್ದರೂ ಕ್ಲೇಮ್ ಮಾಡಿಕೊಳ್ಳದೆ ರೋಗಿಯಿಂದಲೇ ಬಿಲ್ ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೂರು ಪಟ್ಟು ಹಣ ವಸೂಲಿ: ಜು. 22ರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಹತ್ತಿರದ ಪುಣ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು, ಏನೂ ಸಮಸ್ಯೆ ಇಲ್ಲ ಎಂದು ಕಳುಹಿಸಿದರು. ಮರುದಿನವೂ ಅದೇ ರೀತಿ ಆಯಿತು. ಪುನಃ ಆಸ್ಪತ್ರೆಗೆ ಹೋದಾಗ ತಪಾಸಣೆ ಮಾಡಿ ದಾಖಲಾಗಲು ಸೂಚಿಸಿದರು. ಬಳಿಕ ಕೋವಿಡ್ ಪರೀಕ್ಷೆ ಮಾಡಿಸಿದರು. 2 ದಿನಗಳ ನಂತರ (ಜು. 25) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದೇ ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದು ಬಿಡುಗಡೆಯಾದೆ. ಚಿಕಿತ್ಸೆ ನೀಡಿದ್ದಕ್ಕಿಂತ ಹೆಚ್ಚು ಹಣ ಪಡೆದುಕೊಂಡರು. ವಿವರಣೆ ಕೇಳಿದ್ದಕ್ಕೆ ದಬಾಯಿಸಿದರು. ಆರೋಗ್ಯ ವಿಮೆ ಕ್ಲೇಮ್ ಮಾಡಿಕೊಳ್ಳುವಂತೆ ಹೇಳಿದರೂ2.65 ಲಕ್ಷ ರೂ. ಪಡೆದರು. ಆಸ್ಪತ್ರೆಯ ದರದ ಪ್ರಕಾರ ಲೆಕ್ಕ ಹಾಕಿದರೂ 1.50 ಲಕ್ಷ ರೂ. ಆಗುತ್ತದೆ ಎಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ರಮೇಶ್ ಅಳಲು ತೋಡಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹತ್ತು ದಿನಗಳಲ್ಲಿ 8 ದಿನ ಆಕ್ಸಿಜನ್ ಅಳವಡಿಸಿದ್ದರು. ಇಬ್ಬರು ವೈದ್ಯರು ಸರತಿ ಮೇಲೆ ಬಂದು ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಒಂದೆರಡು ದಿನ ಯಾರೊಬ್ಬರೂ ಬಂದು ನೋಡಿರಲಿಲ್ಲ. ಪ್ಯಾರಾಸೆಟಮಲ್, ಡೋಲೋ 650, ವಿಟಮಿನ್ ಸಿ ಸೇರಿ ಸಾಮಾನ್ಯ ಮಾತ್ರೆಗಳನ್ನು ನೀಡಿದರು. ಜತೆಗೆ ಒಂದು ಸೆಟ್ ಪೇಸ್ಟ್, ಬ್ರಷ್, ಸೋಪು, ಸ್ಯಾನಿಟೈಸರ್, ಗ್ಲೌಸ್, ಆಕ್ಸಿಮೀಟರ್ ಕೊಟ್ಟಿದ್ದರು ಎಂದು ರಮೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಆಸ್ಪತ್ರೆಯ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಕೋವಿಡ್ ಪರೀಕ್ಷೆಗೂ 5,500 ರೂ. ಪಡೆದಿದ್ದಾರೆ. ಪ್ರಯೋಗಾಲಯ ಪರೀಕ್ಷೆ ಹೆಸರಿನಲ್ಲಿ 24,350 ರೂ. ಬಿಲ್ ಮಾಡಿದ್ದಾರೆ. ಆದರೆ, ಎರಡು ಬಾರಿ ಎಕ್ಸ್ ರೇ ಒಂದೆರಡು ರಕ್ತಪರೀಕ್ಷೆ ಹೊರತಾಗಿ ಬೇರಾವುದೇ ಪರೀಕ್ಷೆ ಮಾಡಿಲ್ಲ. ಆದಾಗಿಯೂ ಲಿವರ್ ಫಂಕ್ಷನಿಂಗ್ ಟೆಸ್ಟ್ ಎಂದು ದಾಖಲಿಸಿದ್ದಾರೆ. ಮೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಆಸ್ಪತ್ರೆಯವರನ್ನು ಕೇಳಿದರೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. | ರಮೇಶ್ ಕೋವಿಡ್ ಚಿಕಿತ್ಸೆ ಪಡೆದವರು

ನೋಡಲ್ ಅಧಿಕಾರಿ ನಿರ್ಲಿಪ್ತ!

ರಮೇಶ್ ಅವರ ಚಿಕಿತ್ಸಾ ದರ ಹೆಚ್ಚು ಪಡೆದಿರುವ ಕುರಿತು ‘ವಿಜಯವಾಣಿ’ಪುಣ್ಯ ಆಸ್ಪತ್ರೆ ವ್ಯಾಪ್ತಿಯ ಬಿಬಿಎಂಪಿ ನೋಡಲ್ ಅಧಿಕಾರಿ ಸುಶಾಂತ್ ಅವರನ್ನು ಸಂರ್ಪಸಿದಾಗ ವಾಟ್ಸ್​ಆಪ್ ನಲ್ಲಿ ಬಿಲ್ ಶೇರ್ ಮಾಡುವಂತೆ ಸೂಚಿಸಿದರು. ಆದರೆ ಅದನ್ನು ಪರಿಶೀಲಿಸುವುದಿರಲಿ, ನಂತರದ ಸಂಪರ್ಕಕ್ಕೂ ಸಿಗಲಿಲ್ಲ. ರೋಗಿಯು ವಿಮೆ ಸೌಲಭ್ಯ ಹೊಂದಿದ್ದರೂ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.

ಕೋವಿಡ್ ಪರೀಕ್ಷೆಗೆ -ಠಿ;5,500 ವಸೂಲಿ

ಕೋವಿಡ್ ಪರೀಕ್ಷೆಗೆ ಆಸ್ಪತ್ರೆಯವರು 5,500 ರೂ. ಬಿಲ್ ಮಾಡಿದ್ದಾರೆ. ಆದರೆ, ಸರ್ಕಾರ ಪಿಪಿಇ ಕಿಟ್ ದರ ಸೇರಿ ಕೇವಲ 3 ಸಾವಿರ ರೂ. ಪಡೆಯಬೇಕು ಎಂದು ಆದೇಶಿಸಿದೆ. ಆದಾಗಿಯೂ ಆಸ್ಪತ್ರೆಯಲ್ಲಿ ರಮೇಶ್, ಅವರ ಪತ್ನಿ ಹಾಗೂ ಪುತ್ರಿಯ ಕೋವಿಡ್ ಪರೀಕ್ಷೆಗೆ ತಲಾ 5,500 ರೂ. ವಸೂಲಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net