ಮಕ್ಕಳ ಕಾಳಜಿ ಮುಖ್ಯ; ಕರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸಂಕಷ್ಟ

sdfsdfgvb
Published on

ಸುಮಾರು ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಜಗತ್ತನ್ನು ಬಾಧಿಸುತ್ತಿರುವ ಕರೊನಾ ಮಹಾಮಾರಿ ಅಂತೂ ಈಗ ಸ್ವಲ್ಪ ತಹಬಂದಿಗೆ ಬಂದಿರುವಂತೆ ಅನಿಸುತ್ತಿದೆಯಾದರೂ ಅದು ಸೃಷ್ಟಿಸಿರುವ ಸಂಕಟಗಳು-ಸಮಸ್ಯೆಗಳು ಮನುಕುಲವನ್ನು ಬೇಗನೆ ಬಿಟ್ಟುಹೋಗುವುದಿಲ್ಲ ಎಂಬುದಂತೂ ಪಕ್ಕಾ. ಜನಜೀವನದ ಬಹುತೇಕ ಎಲ್ಲ ರಂಗಗಳ ಮೇಲೆ ಕರೊನಾ ಕರಿನೆರಳು ಬಿದ್ದಿದೆ. ಈಗ ಸ್ವಲ್ಪ ಚೇತರಿಕೆ ಕಂಡುಬರುತ್ತಿದೆಯಾದರೂ ಕೋವಿಡ್​ಪೂರ್ವ ಸ್ಥಿತಿಗೆ ತಲುಪಲು ಸವೆಸಬೇಕಾದ ದಾರಿ ಬಹಳ ದೂರವಿದೆ. ಅದರಲ್ಲೂ, ಕರೊನಾದಿಂದಾಗಿ ಮಕ್ಕಳು ಅನುಭವಿಸಿರುವ- ಅನುಭವಿಸುತ್ತಿರುವ ವ್ಯಥೆ-ಕಥೆಗಳು ಮನಕರಗಿಸುವಂತಿವೆ.

2020ರ ಮಾರ್ಚ್ ನಿಂದ 2021ರ ಅಕ್ಟೋಬರ್ ಕಾಲಘಟ್ಟದಲ್ಲಿ, ಕರೊನಾ ಮೊದಲನೆಯ ಅಲೆ ಸಂದರ್ಭದಲ್ಲಿ ಭಾರತದಲ್ಲಿ 19.2 ಲಕ್ಷ ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ಲ್ಯಾನ್ಸೆಟ್ ನಿಯತಕಾಲಿಕದ ವರದಿ ಹೇಳಿದೆ. ಇಪ್ಪತ್ತು ದೇಶಗಳಲ್ಲಿ ಈ ಅಧ್ಯಯನ ನಡೆಸಿದ್ದು, ಭಾರತದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗಿದ್ದಾರೆ; ಒಟ್ಟಾರೆಯಾಗಿ 52 ಲಕ್ಷ ಮಕ್ಕಳು ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಬೊಟ್ಟುಮಾಡಿದೆ. ಆದರೆ ಭಾರತದಲ್ಲಿ ಈ ಕುರಿತ ನಿಖರ ಅಂಕಿಸಂಖ್ಯೆಗಳಲ್ಲಿ ಗೊಂದಲವಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಲ್ಲಿ 2022ರ ಫೆಬ್ರವರಿ 5ರ ಹೊತ್ತಿಗೆ, ಕೋವಿಡ್​ನಿಂದಾಗಿ ಪಾಲಕರನ್ನು ಕಳೆದುಕೊಂಡ 3,890 ಮಕ್ಕಳ ನೋಂದಣಿ ಆಗಿದೆ ಎಂದು ವರದಿಗಳು ಹೇಳುತ್ತವೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ವರದಿ ಪ್ರಕಾರ, 2020ರ ಏಪ್ರಿಲ್​ನಿಂದ 2021ರ ಜೂನ್​ವರೆಗೆ, ಪಾಲಕರನ್ನು ಕಳೆದುಕೊಂಡ 3,661 ಮಕ್ಕಳ ಮಾಹಿತಿ ಲಭಿಸಿದೆ. ಕೋವಿಡ್​ನಿಂದಾಗಿ ಮೃತರಾದ ಅನೇಕ ಪ್ರಕರಣಗಳಲ್ಲಿ, ಸಾವಿನ ಕಾರಣದ ಬಗ್ಗೆ ಗೊಂದಲಗಳಿವೆ. ಹೀಗಾಗಿ ನಿಖರ ಅಂಕಿಸಂಖ್ಯೆ ಸ್ವಲ್ಪ ಕಷ್ಟವೇ. ಹೀಗಿದ್ದರೂ ಈ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ ಎಂಬುದಂತೂ ನಿಜ. ಸಂತ್ರಸ್ತರಿಗೆ ಪರಿಹಾರದ ವಿಷಯದಲ್ಲಿ ಉದಾರವಾಗಿರುವಂತೆ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇನ್ನು, ಕೊವಿಡ್​ನಿಂದಾಗಿ ಎರಡೂ ಪಾಲಕರನ್ನು ಅಥವಾ ಒಬ್ಬ ಪಾಲಕರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ, ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿರುವುದು ಸ್ವಲ್ಪ ಸಮಾಧಾನಕರ. ಇದು ಸರ್ಕಾರಗಳ ಮಾನವೀಯ ಕರ್ತವ್ಯವೂ ಹೌದು. ಆದರೆ ಈ ಯೋಜನೆಗಳು ಅರ್ಹ ಮಕ್ಕಳನ್ನು ಸರಿಯಾಗಿ ತಲುಪುವಂತೆ ನಿಗಾ ವಹಿಸಬೇಕಾದುದು ಕೂಡ ಬಹಳ ಮುಖ್ಯ. ಏಕೆಂದರೆ, ಇಂಥ ವಿಷಯದಲ್ಲಿಯೂ ಹಣ ಹೊಡೆಯುವ ಮನಸ್ಥಿತಿಯವರಿರುತ್ತಾರೆ. ಅಲ್ಲದೆ, ಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ಕಳ್ಳಸಾಗಣೆ ಮಾಡುವ ಅಥವಾ ಅಕ್ರಮ ಚಟುವಟಿಕೆಗಳಿಗೆ ತಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ. ಈ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಬೇಕಾದುದು ಮತ್ತು ಅವರಿಗೆ ಕಾಲಕಾಲಕ್ಕೆ ಅಗತ್ಯ ಶಿಕ್ಷಣ ಮತ್ತಿತರ ಸವಲತ್ತುಗಳು ದೊರೆಯುವಂತೆ ಕಾಳಜಿ ವಹಿಸಬೇಕಾದ್ದು ಸರ್ಕಾರ ಮತ್ತು ಸಮಾಜಗಳ ಕರ್ತವ್ಯ ಮತ್ತು ಹೊಣೆಗಾರಿಕೆ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net