

ಮುಂಬೈ : ಡೆಲ್ಟಾ ಪ್ಲಸ್ ಕರೊನಾ ರೂಪಾಂತರಿ ಸೋಂಕಿನಿಂದಾಗಿ ಈವರೆಗೆ ಮಹಾರಾಷ್ಟ್ರದಲ್ಲಿ ಮೂರು ಸಾವುಗಳು ವರದಿಯಾಗಿದ್ದು, ಮೂರೂ ಪ್ರಕರಣಗಳು ಹಿರಿಯ ನಾಗರೀಕರದ್ದಾಗಿವೆ.
ಮುಂಬೈನ 63 ವರ್ಷ ವಯಸ್ಸಿನ ಕರೊನಾ ಸೋಂಕಿತ ಮಹಿಳೆಯು ಜುಲೈ 27 ರಂದು ಮೃತಪಟ್ಟಿದ್ದು, ಜಿನೋಮ್ ಸೀಕ್ವೇಂಸಿಂಗ್ನಿಂದ ಅವರು ಡೆಲ್ಟಾ ಪ್ಲಸ್ ರೂಪಾಂತರಿಯ ಸೋಂಕು ಹೊಂದಿದ್ದರೆಂಬುದು ಇದೀಗ ಖಚಿತವಾಗಿದೆ. ಕಳೆದ ತಿಂಗಳಲ್ಲಿ ರಾಯಗಡದ 69 ವರ್ಷದ ಪುರುಷ ಮತ್ತು ರತ್ನಗಿರಿಯ 80 ವರ್ಷದ ಮಹಿಳೆ ಇದೇ ರೂಪಾಂತರಿಯ ಸೋಂಕಿನಿಂದ ಮೃತಪಟ್ಟಿದ್ದರು.
ಇತ್ತೀಚೆಗೆ ಮೃತಪಟ್ಟ ಮುಂಬೈನ ಸೋಂಕಿತೆಯು ಹಲವು ಕೋರ್ಮಾರ್ಬಿಡಿಟೀಸ್ ಹೊಂದಿದ್ದರು. ಆಕ್ಸಿಜನ್ ಸಪೋರ್ಟ್ ಕೊಟ್ಟು, ರೆಮ್ಡೆಸಿವಿರ್ ಚುಚ್ಚುಮದ್ದಿನಿಂದ ಕೂಡ ಚಿಕಿತ್ಸೆ ನೀಡಲಾಗಿದ್ದರೂ ಫಲಕಾರಿಯಾಗಿರಲಿಲ್ಲ. ನಗರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಗೆ ಪಾಸಿಟೀವ್ ಬಂದಿದ್ದ ಏಳು ಜನರಲ್ಲಿ ಒಬ್ಬರಾಗಿದ್ದ ಈಕೆ ಕರೊನಾ ಲಸಿಕೆ ಕೂಡ ಪಡೆದಿದ್ದರು ಎನ್ನಲಾಗಿದೆ.
ಮುಂಬೈನ 7 ಜನ ಸೋಂಕಿತರೊಂದಿಗೆ ಬೇರೆ ಜಿಲ್ಲೆಗಳಲ್ಲಿ ಇನ್ನೂ 13 ಜನರಲ್ಲಿ ಡೆಲ್ಟಾಪ್ಲಸ್ ರೂಪಾಂತರಿಯ ಸೋಂಕು ಕಂಡುಬಂದಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ದೇಶಾದ್ಯಂತ ಈವರೆಗೆ 65 ಸೋಂಕು ಪ್ರಕರಣಗಳಲ್ಲಿ ಈ ರೂಪಾಂತರಿ ಕಂಡುಬಂದಿದೆ. (ಏಜೆನ್ಸೀಸ್)