ಕಾಶಿ ವಿಶ್ವೇಶ್ವರ ಸಾಂಸ್ಕೃತಿಕ ಭವನದಲ್ಲೂ ಕರೊನಾ ಕೇಂದ್ರ​; ಕಾಶಿ ಮಹಾಪೀಠದ ಮಂಗಳವೇಡಾದಲ್ಲಿ ಸ್ಥಾಪನೆ

Kashi
Published on

ಬೆಂಗಳೂರು: ಜಗತ್ತಿನಾದ್ಯಂತ ಕರೊನಾ ಹಾವಳಿ ಇಟ್ಟಿದ್ದು, ದೇಶ-ರಾಜ್ಯದಲ್ಲೂ ಅದರಿಂದುಂಟಾಗುತ್ತಿರುವ ಸಾವು-ನೋವಿನ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಲೇ ಇದೆ. ಸರ್ಕಾರಗಳು ಕರೊನಾ ಪರಿಸ್ಥಿತಿಯನ್ನು ನಿವಾರಿಸಲು ಹರಸಾಹಸ ಪಡುತ್ತಿದ್ದು, ಇದೀಗ ಮಠ-ಮಂದಿರಗಳೂ ಕರೊನಾ ಕಗ್ಗಂಟಿನ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿವೆ. ಆ ನಿಟ್ಟಿನಲ್ಲಿ ಕಾಶಿ ಜಗದ್ಗುರುಗಳೂ ಅಗತ್ಯ ನೆರವು ನೀಡುತ್ತಿದ್ದು, ಕರೊನಾ ಕೇಂದ್ರವನ್ನೂ ಸ್ಥಾಪಿಸಿದ್ದಾರೆ.

ಸೋಲಾಪುರ ಜಿಲ್ಲೆಯ ಮಂಗಳವೇಡಾ ನಗರದಲ್ಲಿ ಕಾಶಿ ಪೀಠದ ಶ್ರೀ ಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ಕರೊನಾ ಕೇಂದ್ರವು ಸ್ಥಾಪನೆಗೊಂಡಿದೆ. ಶ್ರೀ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಶ್ರೀ ಪೀಠದಿಂದ ಈ ಭವನವನ್ನು ನಿರ್ಮಿಸಿ ಒದಗಿಸಿದ್ದಾರೆ. ಈ ಕೇಂದ್ರದಲ್ಲಿ 4000 ಚದರಡಿಯ ಒಂದು ಊಟದ ಮನೆ, 10000 ಚದರಡಿಯ ಒಂದು ಸಾಂಸ್ಕೃತಿಕ ಭವನವಿದ್ದು ಉಳಿದದ್ದು ತೆರೆದ ಪ್ರದೇಶವಾಗಿದೆ. ಇಲ್ಲಿ ಯಾವುದೇ ಜಾತಿ-ಧರ್ಮಗಳ ಭೇದ-ಭಾವ ಮಾಡದೆ ಎಲ್ಲರ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಕ್ತವಾದ ಅವಕಾಶವಿದೆ.

ಕಳೆದ ವರ್ಷವೂ ಇದೇ ಸ್ಥಳದಲ್ಲಿ ಕರೊನಾ ಶುಶ್ರೂಷೆಗೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ವರ್ಷ ಕರೊನಾ ಹಾವಳಿ ಮಹಾರಾಷ್ಟ್ರದಲ್ಲಿ ಉಲ್ಬಣ ಸ್ಥಿತಿಗೆ ಏರಿದಾಗ ಸೋಲಾಪುರ ಸಂಸದ ಡಾಕ್ಟರ್ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸೂಚನೆಯಂತೆ ಮತ್ತು ಸೋಲಾಪುರ ಜಿಲ್ಲಾಧಿಕಾರಿ ಶ್ರೀ ಮಿಲಿಂದ ಶಂಬರಕರ ಅವರ ಅಪೇಕ್ಷೆ ಮೇರೆಗೆ ಏಳು ತಿಂಗಳವರೆಗೆ ಎಲ್ಲ ಪರಿಸರವನ್ನು ಕರೊನಾ ಸೋಂಕಿತರ ಶುಶ್ರೂಷೆಗೆ ಉಚಿತವಾಗಿ ಕೊಡಲಾಗಿತ್ತು.

ಅದೇ ರೀತಿ ಈ ವರ್ಷ ಸಹ ಕರೊನಾ ರೋಗಿಗಳ ಶುಶ್ರೂಷೆಗಾಗಿ ಸೋಲಾಪುರ ಜಿಲ್ಲಾಧಿಕಾರಿಗಳ ಅಪೇಕ್ಷೆ ಮೇರೆಗೆ ಶ್ರೀ ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಮಂಗಳವೇಡಾದ ಕಾಶಿ ವಿಶ್ವೇಶ್ವರ ಸಾಂಸ್ಕೃತಿಕ ಭವನದ ಎರಡೂ ಭವನಗಳನ್ನು ಮತ್ತು ಸಂಪೂರ್ಣ ಪರಿಸರವನ್ನು ಕರೊನಾ ಸೋಂಕಿತರ ಶುಶ್ರೂಷೆಗಾಗಿ ಏಪ್ರಿಲ್ 21ರಿಂದಲೇ ಉಚಿತವಾಗಿ ಒದಗಿಸಿದ್ದಾರೆ. 

ಸಾಂಸ್ಕೃತಿಕ ಭವನದಲ್ಲಿನ ಕರೊನಾ ಕೇಂದ್ರದ ದೃಶ್ಯ
ಕಾಶಿ ವಿಶ್ವೇಶ್ವರ ಸಾಂಸ್ಕೃತಿಕ ಭವನ ಹೊರಾಂಗಣ ದೃಶ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net