ಸುದ್ದಿ ಸಮಗ್ರ: ಯುರೋಪ್​ನಲ್ಲಿ ಕರೊನಾ ಇಳಿಕೆ

Nation-1
Published on

ನವದೆಹಲಿ: ಯುರೋಪ್​ನ ಹಲವು ದೇಶಗಳಲ್ಲಿ ಗರಿಷ್ಠ ಮಟ್ಟದಲ್ಲಿ ಇದ್ದ ಕೋವಿಡ್-19 ಸೋಂಕು, ಲಾಕ್​ಡೌನ್ ತೆರವು ನಂತರ ಇಳಿಮುಖವಾಗುತ್ತಿದೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಭಿಡೆಯಿಂದ ಓಡಾಡುತ್ತಿದ್ದಾರೆ. ಹಲವು ದೇಶಗಳು ಕರೊನಾ ಮುಕ್ತ ಎಂದು ಘೊಷಿಸಿಕೊಂಡಿವೆ. ಇನ್ನು ಕೆಲವು ದೇಶಗಳಲ್ಲಿ ಕೋವಿಡ್-19 ಮತ್ತೆ ಆಸ್ಪೋಟಿಸಬಹುದೆಂಬ ಭೀತಿಯಿದ್ದರೂ ಒಟ್ಟಾರೆಯಾಗಿ ಪರಿಸ್ಥಿತಿ ತಿಳಿಯಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣಗಳನ್ನು ಹೊಂದಿದ್ದ ದೇಶಗಳು ಅದರ ಪ್ರಸರಣ ತಡೆಗಾಗಿ ಮಾರ್ಚ್​ನಲ್ಲಿ ವಿಧಿಸಿದ್ದ ಲಾಕ್​ಡೌನ್ ಕ್ರಮವನ್ನು ಮೇ ಆರಂಭದಿಂದ ತೆಗೆಯಲು ಆರಂಭಿಸಿದ್ದವು. ಏಪ್ರಿಲ್ ಮಧ್ಯಭಾಗದಲ್ಲಿ ದಿನವೂ ಸಾವಿರಾರು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದ ಈ ದೇಶಗಳಲ್ಲಿ ಈಗ ಸೋಂಕು ಪ್ರಮಾಣ ಕಡಿಮೆಯಾಗಿದೆ. ಲಾಕ್​ಡೌನ್ ತೆರವಿನಿಂದ ಪ್ರಕರಣಗಳು ಮತ್ತೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಾರದೆಂಬ ಆಶಯದೊಂದಿಗೆ ಸಾಮಾನ್ಯ ಜನಜೀವನ ನಡೆಸುತ್ತಿವೆ.

ಫ್ರಾನ್ಸ್​ನಲ್ಲಿ ಏನಾಯಿತು?: ಫ್ರಾನ್ಸ್​ನಲ್ಲಿ ಕರೊನಾ ಪ್ರಕರಣಗಳು ತೀವ್ರ ವೇಗದಲ್ಲಿ ಹರಡಿದ್ದವು. ಲಾಕ್​ಡೌನ್ ತೆರವಿನ ನಂತರ ವಾರದಲ್ಲಿ ಏರಿಕೆ ಪ್ರಮಾಣ ಮೂರು ಪಟ್ಟು ಹೆಚ್ಚಿತು. ಜೂನ್ ಮೊದಲ ವಾರದಿಂದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯಿತು. ಕರೊನಾ ವೈರಸ್ ಮೇಲೆ ದೇಶ ಮೊದಲ ವಿಜಯ ಸಾಧಿಸಿದೆ ಎಂದಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮಾಕ್ರನ್, ತಮ್ಮ ದೇಶ ಹಸಿರು ವಲಯ ಪ್ರವೇಶಿಸಿದೆ ಎಂದಿದ್ದಾರೆ. ಆದರೆ, ಮಹಾಮಾರಿ ವಿರುದ್ಧದ ಸಮರ ಇಲ್ಲಿಗೇ ಮುಗಿದಿಲ್ಲ ಎಂದವರು ಹೇಳಿದ್ದಾರೆ.

ಮತ್ತೆ ಆಸ್ಪೋಟದ ಭೀತಿ: ಕರೊನಾ ವೈರಸ್ ಈಗ ನಿಯಂತ್ರಣಕ್ಕೆ ಬಂದರೂ ಮುಂದೆ ಅದು ಮರುಕಳಿಸುವುದಿಲ್ಲ ಎಂದು ಹೇಳಲಾಗದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕರೊನಾದೊಂದಿಗೆ ಬದುಕು ಸಾಗಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರೊನಾ ಮರುಕಳಿಸಬಹುದು ಎನ್ನುವ ಭೀತಿಗೆ ಹಿಂದಿನ ಸ್ಪಾನಿಶ್ ಜ್ವರದ ಪ್ರಕರಣವೇ ಆಧಾರವಾಗಿದೆ. ಕಳೆದ ಶತಮಾನದಲ್ಲಿ, 1918ರಲ್ಲಿ ಮೊದಲಿಗೆ ಕಾಣಿಸಿಕೊಂಡು ಹಾವಳಿ ಎಸಗಿದ್ದ ಸ್ಪಾನಿಶ್ ಫ್ಲೂ, ಆನಂತರ ಮತ್ತೆ ಬಾಧಿಸಿತ್ತು.

ಚೀನಾ, ಕೊರಿಯಾದಲ್ಲಿ 2ನೇ ಲಾಕ್​ಡೌನ್: ಚೀನಾ ಮತ್ತು ದಕ್ಷಿಣ ಕೊರಿಯಾ ಮಾರಕ ವೈರಸ್​ನ ಮೊದಲ ಪ್ರಕರಣಗಳನ್ನು ದಾಖಲಿಸಿದ ದೇಶಗಳು. ಲಾಕ್​ಡೌನ್ ಪ್ರಕ್ರಿಯೆ ವಾಪಸ್ ಪಡೆದ ಮೊದಲ ದೇಶಗಳು ಕೂಡ ಅವೇ ಆಗಿವೆ. ಲಾಕ್​ಡೌನ್ ವಾಪಸ್ ಪಡೆದ ನಂತರ ಹೊಸ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಅಲ್ಲಿ ಮತ್ತೆ ಲಾಕ್​ಡೌನ್ ಘೊಷಿಸಲಾಗಿತ್ತು. ಆಗ ಹೊಸ ಪ್ರಕರಣಗಳು ನಿಯಂತ್ರಣದಲ್ಲಿದ್ದವು. ಬ್ರೆಜಿಲ್, ಅಮೆರಿಕ ಮತ್ತು ಭಾರತದಂಥ ದೇಶಗಳಲ್ಲಿನ ಪ್ರಕರಣಗಳು ದಿನೇ ದಿನೇ ಏರುತ್ತಿದ್ದಾಗ ಏಷ್ಯಾದ ಈ ಎರಡು ದೇಶಗಳಲ್ಲಿ ಪ್ರಕರಣಗಳು ಉತ್ತುಂಗ ತಲುಪಿದ್ದವು.

ಗಡಿ ಮುಕ್ತ: ಐಸ್​ಲೆಂಡ್, ಗ್ರೀಸ್ ಮುಂತಾದ ಕೆಲವು ಯುರೋಪ್ ರಾಷ್ಟ್ರಗಳು ಐರೋಪ್ಯ ಒಕ್ಕೂಟ, ಶೆಂಗೆನ್ ಪ್ರವಾಸಿಗರ ಆಗಮನಕ್ಕಾಗಿ ಸೋಮವಾರ ತಮ್ಮ ಗಡಿಗಳನ್ನು ಮುಕ್ತಗೊಳಿ ಸಿವೆ. ಜೂನ್ 21ರವರೆಗೆ ವಿದೇಶಿಯರ ಆಗಮನಕ್ಕೆ ಅವಕಾಶ ನೀಡದಿರಲು ಸ್ಪೇನ್ ನಿರ್ಧರಿಸಿದೆ.

ಗರಿಷ್ಠ ಮಟ್ಟ ತಲುಪಿ ಇಳಿಕೆ: ಯುರೋಪ್ ದೇಶಗಳಲ್ಲಿ ಏರುಗತಿಯಲ್ಲಿದ್ದ ಸೋಂಕಿನ ಪ್ರಮಾಣ, ಈಗ ಇಳಿಕೆಯಾಗಿ ಕನಿಷ್ಠ ಮಟ್ಟಕ್ಕೆ ಬರುತ್ತಿದೆ. ಇದೇ ರೀತಿ ಭಾರತ ಮತ್ತು ಅಮೆರಿಕದಲ್ಲಿ ಕರೊನಾ ಸೋಂಕಿನ ಪ್ರಮಾಣ ಈಗ ಏರುಗತಿಯಲ್ಲಿದ್ದು ಮುಂದಿನ ಕೆಲವು ವಾರ ಇದು ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ನಂತರ ಪ್ರಕರಣಗಳು ಇಳಿಕೆ ಹಾದಿ ಹಿಡಿಯಲಿವೆ.

ಪರಿಣಾಮಕಾರಿ ಕ್ರಮಗಳು: ಪದೇಪದೆ ಕೈತೊಳೆಯುವುದು ಹಾಗೂ ಮಾಸ್ಕ್ ಧರಿಸುವುದು ಇವೇ ಮೊದಲಾದ ಅಭ್ಯಾಸಗಳು ಯುರೋಪ್​ನಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬರಲು ನೆರವಾದವು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದಲ್ಲದೆ ಈ ದೇಶಗಳು, ಮುಂದೆ ಇಂಥ ಸಾಂಕ್ರಾಮಿಕತೆ ಹರಡುವುದನ್ನು ತಡೆಯುವ ಸಲುವಾಗಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಕ್ರಮಕ್ಕೂ ಮುಂದಾಗಿವೆ. ಕರೊನಾ ವೈರಸ್ ಜನರು ಗುಂಪು ಗೂಡುವ ಸ್ಥಳದಲ್ಲಿ ಹೆಚ್ಚಾಗಿ ಹಬ್ಬುತ್ತದೆ ಎಂಬ ವಾಸ್ತವತೆ ಹಿನ್ನೆಲೆಯಲ್ಲಿ ದೈಹಿಕ ಅಂತರ ಮತ್ತು ಹಲವು ಲಾಕ್​ಡೌನ್ ನಿಯಮಗಳನ್ನು ಯುರೋಪ್​ನ ಜನ ಕಟ್ಟುನಿಟ್ಟಿನಿಂದ ಪಾಲಿಸಿರುವುದು ಸೋಂಕು ಪ್ರಕರಣ ತಗ್ಗಲು ಕಾರಣ ಎಂದು ತಜ್ಞರು ಹೇಳಿದ್ದಾರೆ.

ನ್ಯೂಜಿಲೆಂಡ್ ಮಾಡಿದ್ದೇನು?: ನ್ಯೂಜಿಲೆಂಡ್ ಕರೊನಾ ವೈರಸ್ ಮುಕ್ತವೆಂದು ಜೂನ್ 8ರಂದು ಘೊಷಿಸಿಕೊಂಡಿದೆ. 50 ಲಕ್ಷ ಜನಸಂಖ್ಯೆಯ ಈ ದೇಶದಲ್ಲಿ 1504 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು ಹಾಗೂ 22 ಜನರು ಮೃತಪಟ್ಟಿದ್ದರು. ಮಾರ್ಚ್ 25ರಿಂದ ಲಾಕ್​ಡೌನ್ ಜಾರಿಗೊಳಿಸಿ, ಐದು ವಾರ ಮುಂದುವರಿಸಿತ್ತು. ಇದೀಗ ಸಾಮಾಜಿಕ ಅಂತರ ಹಾಗೂ ಸಾರ್ವಜನಿಕ ಸಭೆಗಳ ಮೇಲೆ ವಿಧಿಸಿದ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿದೆ. ಜನರು ಮತ್ತೆ ಪರಸ್ಪರ ಕೈಕುಲುಕಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಮಾಸ್ಕ್ ಧರಿಸುವುದನ್ನೂ ಆ ದೇಶದ ಜನರು ಬಿಟ್ಟಿದ್ದಾರೆ. ಆದರೆ ದೇಶದ ಗಡಿಗಳನ್ನು ಮಾತ್ರ ಇನ್ನೂ ತೆರೆದಿಲ್ಲ. ಕರೊನಾ ಸಾಂಕ್ರಾಮಿಕತೆ ಹರಡಲು ಆರಂಭವಾಗುತ್ತಿದ್ದಂತೆ ಹೆಚ್ಚು ಅಪಾಯವಿದ್ದ ಪ್ರದೇಶಗಳಿಂದ ಜನರು ದೇಶಕ್ಕೆ ಬರುವ ಮೇಲೆ ಅದು ನಿರ್ಬಂಧ ವಿಧಿಸಿತ್ತು. ವಿದೇಶಗಳಲ್ಲಿರುವ ತನ್ನ ನಾಗರಿಕರು ಏಳು ದಿನದೊಳಗೆ ದೇಶಕ್ಕೆ ಮರಳಲು ಸೂಚಿಸಿತ್ತು. ಸೋಂಕಿತರ ಕ್ವಾರಂಟೈನ್​ಗಾಗಿ ಮಿಲಿಟರಿ ನೆಲೆಯನ್ನು ಆಸ್ಪತ್ರೆಯಾಗಿ ಪರಿವರ್ತಿಸಿತ್ತು. ಗಂಭೀರ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

ವೇತನ ಪರಿಹಾರ: ಲಾಕ್​ಡೌನ್ ಅವಧಿಯಲ್ಲಿ ಪ್ರತಿ ನೌಕರರಿಗೆ ವೇತನ ನೀಡಲು ಸರ್ಕಾರ ಉದ್ಯಮಗಳಿಗೆ ವಾರಕ್ಕೆ ತಲಾ 585 ನ್ಯೂಜಿಲೆಂಡ್ ಡಾಲರ್ ನೀಡಿತ್ತು. ಇದು ಮೂರು ತಿಂಗಳ ಅವಧಿಗೆ ಚಾಲ್ತಿಯಲ್ಲಿತ್ತು. ಬಾಡಿಗೆ ಕೊಡಲು ಆಗದಿದ್ದರೆ ಮನೆ ಖಾಲಿ ಮಾಡುವಂತೆ ಸೂಚಿಸಬಾರದು ಎಂದು ಮನೆ ಮಾಲಿಕರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net