

ಬೆಂಗಳೂರು: ಹೊರ ರಾಜ್ಯಗಳಿಂದ ಕರ್ನಾಟಕದ ಮೇಲೆ ನಡೆಯುತ್ತಿರುವ ಕರೊನಾ ದಾಳಿ ಹಿಂದೆಂದಿಗಿಂತಲೂ ಭೀಕರ ಸ್ವರೂಪ ಪಡೆದಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಅಂದರೆ ಕೇವಲ ಅರ್ಧ ದಿನದಲ್ಲಿಯೇ 127 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಒಂದೇ ದಿನದಲ್ಲಿ ಮೂವರು ವೈರಸ್ನಿಂದ ಮೃತಪಟ್ಟಿದ್ದಾರೆ. ಈ ಪೈಕಿ ಮಂಡ್ಯ ಒಂದರಲ್ಲಿಯೇ 62 ಹೊಸ ಸೋಂಕಿತರು ಪತ್ತೆಯಾಗಿದ್ದು, ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇಲ್ಲಿ ಕೂಡ ಮಹಾರಾಷ್ಟ್ರದಿಂದ ಬಂದವರೇ ಸೋಂಕಿಗೆ ಗುರಿಯಾದವರು.
ಮಹಾರಾಷ್ಟ್ರ ಹೊರತುಪಡಿಸಿದರೆ, ಗುಜರಾತ್, ತಮಿಳುನಾಡಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ಬಂದವರಲ್ಲಿಯೂ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ. ಒಟ್ಟಾರೆಯಾಗಿ ಸೋಂಕಿನ ಪ್ರಮಾಣ ರಾಜ್ಯದಲ್ಲಿ 1373ಕ್ಕೆ ಏರಿದೆ. ಈ ಪೈಕಿ 802 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 530 ಮಂದಿ ಬಿಡುಗಡೆಯಾಗಿದ್ದಾರೆ. ವೈರಸ್ ಇದಾಗಲೇ 40 ಮಂದಿಯನ್ನು ಬಲಿ ಪಡೆದಿದೆ.
ಇಂದು ಬಳ್ಳಾರಿಯ 61 ವರ್ಷದ ವ್ಯಕ್ತಿ, ವಿಜಯಪುರದ 65 ವರ್ಷದ ವ್ಯಕ್ತಿ ಹಾಗೂ ಬೆಂಗಳೂರಿನ 54 ವರ್ಷದ ವ್ಯಕ್ತಿ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಉಳಿದಂತೆ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ದಾಖಲಾಗಿರುವ ಸೋಂಕಿನ ವಿವರ ಈ ರೀತಿ ಇದೆ:
ಮಂಡ್ಯ- 62, ದಾವಣಗೆರೆ- 19, ಶಿವಮೊಗ್ಗ- 12, ಕಲಬುರಗಿ- 11, ಬೆಂಗಳೂರು ನಗರ -6, ಉತ್ತರ ಕನ್ನಡ- 4, ಉಡುಪಿ- 4, ಹಾಸನ-3, ಚಿಕ್ಕಮಗಳೂರು-2, ಯಾದಗಿರಿ- 1, ಚಿತ್ರದುರ್ಗ- 1, ವಿಜಯಪುರ-1, ಗದಗ-1.